

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಜಿದ್ದಾಜಿದ್ದಿನ ಪಂದ್ಯವನ್ನು ರಾಜ್ಯದ ನೂತನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುತ್ರಿ ಮತ್ತು ಪುತ್ರನೊಂದಿಗೆ ಮೈದಾನಕ್ಕೆ ತೆರಳಿ ವೀಕ್ಷಿಸಿದ್ದಾರೆ.
ಈ ಬಗ್ಗೆ ಡಿಕೆಶಿ ಟ್ವೀಟ್ ಮಾಡಿದ್ದು, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಪಂದ್ಯ ವೀಕ್ಷಿಸಿದೆ ಎಂದು ಹೇಳಿಕೊಂಡಿದ್ದಾರೆ.
ನಮ್ಮ ಹುಡುಗರು ಈ ಬಾರಿ ಪಂದ್ಯದಲ್ಲಿ ಸೋತಿರಬಹುದು. ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಏನೇ ಆದರೂ ಆರ್ಸಿಬಿ ನನ್ನ ನೆಚ್ಚಿನ ತಂಡ. ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತದೆ. ನಿರಾಸೆ ಬೇಡ, ಆಶಾವಾದವಿರಲಿ ಎಂದು ಡಿಕೆಶಿ ಹಾರೈಸಿದ್ದಾರೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (101 ರನ್, 61 ಎಸೆತ, 13 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-16ರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು 6 ವಿಕೆಟ್ಗಳಿಂದ ಸೋಲು ಅನುಭವಿಸಿತು. ಇದರೊಂದಿಗೆ ಫಾಫ್ ಡು ಪ್ಲೆಸಿಸ್ ಬಳಗ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ. ಜತೆಗೆ ಸತತ 16ನೇ ಸಲವೂ ಆರ್ಸಿಬಿ ಅಭಿಮಾನಿಗಳ ಕಪ್ ಕನಸು ಭಗ್ನಗೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ತಂಡ 5 ವಿಕೆಟ್ಗೆ 197 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಗುಜರಾತ್ ತಂಡ ಆರಂಭಿಕ ಶುಭಮಾನ್ ಗಿಲ್(104* ರನ್, 52 ಎಸೆತ, 5 ಬೌಂಡರಿ, 8 ಸಿಕ್ಸರ್) ಶತಕ ಹಾಗೂ ವಿಜಯ್ ಶಂಕರ್ (53ರನ್, 35 ಎಸೆತ, 7 ಬೌಂಡರಿ, 2 ಸಿಕ್ಸರ್) ಜತೆಗಿನ ಭರ್ಜರಿ ಜತೆಯಾಟದ ನೆರವಿನಿಂದ 19.1 ಓವರ್ಗಳಲ್ಲಿ 4 ವಿಕೆಟ್ಗೆ 198 ರನ್ ಕಲೆಹಾಕಿತು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ಕ್ವಾಲಿಫೈಯರ್-1ಕ್ಕೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.