

ಬೆಂಗಳೂರು: 'ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಅಶ್ವತ್ಥ ನಾರಾಯಣ ಅವರಿಗೆ ಗೊತ್ತಿಲ್ಲ. ಅದಕ್ಕೆ ಅವರು ಮಾತನಾಡುತ್ತಾರೆ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿದುಕೊಳ್ಳಲಿ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಶ್ವತ್ಥ ನಾರಾಯಣ್ಗೆ ತಿರುಗೇಟು ನೀಡಿದರು.
'ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದೆ. ತಮಿಳುನಾಡಿನ ಗಡಿ ಭಾಗ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪ ಅಕ್ಕಪಕ್ಕದಲ್ಲಿ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮನೆ ಇದೆ. ಅಲ್ಲೇ ಹತ್ತಿರದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ನಿವಾಸ ಇದೆ. ಇತ್ತೀಚೆಗೆ ಅದನ್ನು ಮಾರಿದ್ದೇನೆ. ಇದು ನನಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಇರುವ ಸಂಬಂಧ' ಎಂದು ತಿಳಿಸಿದರು.
ಕೆಂಪೇಗೌಡ ಜಯಂತಿ ಆಚರಿಸಲು ತೀರ್ಮಾನಿಸಿದಾಗ ಯಾವ ದಿನ ಜಯಂತಿ ಆಚರಿಸಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಆಗ ನಿರ್ಮಲಾನಂದ ಸ್ವಾಮೀಜಿ ನೇತೃತ್ವದಲ್ಲಿ, ಇತಿಹಾಸ ತಜ್ಞರನ್ನು ಒಳಗೊಂಡಂತೆ ಸಮಿತಿ ರಚಿಸಲಾಯಿತು. ಈ ಸಮಿತಿ ಅಧ್ಯಯನ ಮಾಡಿ ಜೂನ್ 27ರಂದು ಕೆಂಪೇಗೌಡ ಜಯಂತಿ ಎಂದು ತೀರ್ಮಾನಿಸಿತು. ಅಂದಿನಿಂದ ಕೆಂಪೇಗೌಡ ಜಯಂತಿ ಆಚರಣೆ ಮಾಡಿಕೊಂಡು ಬರುತ್ತಿದೆ.
ಮಾಜಿ ಸಚಿವ ಆರ್.ಅಶೋಕ್ ಮುಂದಾಳತ್ವದಲ್ಲಿ ಬೆಂಗಳೂರಿನ ಎಲ್ಲಾ ವಾರ್ಡ್ಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಂಪೇಗೌಡ ಜಯಂತಿ ಆಚರಣೆಯನ್ನು ರಾಜ್ಯಕ್ಕೆ ವಿಸ್ತರಿಸಿ, ರಾಜ್ಯದ ಎಲ್ಲೆಡೆ ಆಚರಣೆಗೆ ತೀರ್ಮಾನಿಸಿದೆವು ಎಂದರು.
ಕೆಂಪೇಗೌಡ ಪ್ರಾಧಿಕಾರ ಸಭೆಯಲ್ಲಿ 75%ಗಿಂತ ಹೆಚ್ಚು ಒಕ್ಕಲಿಗರು ಇದ್ದಾರೆ. ಇದನ್ನು ನೋಡಿ ನಾಚಿಕೆ ಆಯಿತು. ಕೆಂಪೇಗೌಡರು ಯಾವತ್ತೂ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲಾ ಜಾತಿ ಹಾಗೂ ಧರ್ಮಕ್ಕೆ ಸೇರಿದವರಾಗಿದ್ದಾರೆ. ನಾವು ಹುಟ್ಟುವಾಗ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ನಮ್ಮ ತಂದೆ-ತಾಯಿ ಜಾತಿ, ಧರ್ಮ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.
ಕೆಂಪೇಗೌಡರ ಆಚಾರ ವಿಚಾರ ಜಾತಿ ಮೇಲೆ ನಿಂತಿರಲಿಲ್ಲ. ಸಮಾಜದಲ್ಲಿ ಎಲ್ಲಾ ವರ್ಗದವರಿಗೆ ಸ್ಥಾನಮಾನ ಸಿಗಲು ಶ್ರಮಿಸಿದ್ದಾರೆ. ಇಂದು ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ ಅವರನ್ನು ಸ್ಮರಿಸಬೇಕು. ಇವರು ಕಟ್ಟಿರುವ ನಗರವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಬೆಂಗಳೂರು ಕೆಲವು ಭಾಗಗಳು ಮಾತ್ರ ಯೋಜಿತ ನಗರವಾಗಿದ್ದು, ಉಳಿದ ಭಾಗಗಳು ಯೋಜನೆ ರಹಿತವಾಗಿ ಬೆಳೆದುಕೊಂಡಿವೆ. ಇಲ್ಲಿನ ಹವಾಮಾನದಲ್ಲಿ ಬದುಕಿದವರು ಇದನ್ನು ಬಿಟ್ಟು ಹೋಗುವುದಿಲ್ಲ. ಈ ನೆಲದಲ್ಲಿ ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮಿ ಹುಟ್ಟಿದ್ದಾರೆ. ಇದು ಈ ನೆಲದ ವೈಶಿಷ್ಟ್ಯತೆ. ಇದನ್ನು ಧರ್ಮವಾಗಿ, ಅಭಿವೃದ್ಧಿ ಹಾಗೂ ಪ್ರಗತಿಯಾಗಿದೆ ಉಳಿಸಿಕೊಂಡು ಹೋಗಬೇಕು. ಹೀಗಾಗಿ ಈ ಬೆಂಗಳೂರನ್ನು ಅಭಿವೃದ್ಧಿ ಮಾಡಬೇಕು. ಪ್ರಸ್ತುತ ಉತ್ಸುಕತೆಯಿಂದಲೇ ರಾಜ್ಯ ರಾಜಧಾನಿಯ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಬೆಂಗಳೂರು ಅಭಿವೃದ್ಧಿ ಬಗ್ಗೆ ನಿಮ್ಮೆಲ್ಲರ ಸಲಹೆ, ಅಭಿಪ್ರಾಯ, ಸಹಕಾರ ಇರಲಿ' ಎಂದು ಹೇಳಿದರು.