

ದಾವಣಗೆರೆ: ಕಾಲೇಜಿನ ಕಾಂಪೌಂಡ್ನಿಂದ ಜಾರಿ ಬಿದ್ದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಹರಿಹರದ ಕುರುಬರಹಳ್ಳಿಯ ಸಮೀಪದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜಿನಲ್ಲಿ ನಡೆದಿದೆ.
ಸಿನಿಕ್ಷಾ (16) ಮೃತಪಟ್ಟ ವಿದ್ಯಾರ್ಥಿನಿ. ಕಾಂಪೌಂಡ್ನಿಂದ ಬಿದ್ದು ಸಿನಿಕ್ಷಾ ತೀವ್ರ ಗಾಯಗೊಂಡಿದ್ದಳು. ತಕ್ಷಣ ಆಕೆಯನ್ನು ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಮೃತ ಸಿನಿಕ್ಷಾ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಶಶಿಕಾಂತ್ ಎಂಬುವರ ಪುತ್ರಿ. ಮಾನ್ಯತಾ ವಸತಿ ಕಾಲೇಜಿನಲ್ಲಿ ಸೈನ್ಸ್ ವಿಭಾಗದ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಳು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಾಲೇಜಿಗೆ ಹಾಜರಾಗಿದ್ದಳು. ಇದೀಗ ಅಕಾಲಿಕವಾಗಿ ಮೃತಪಟ್ಟಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು ಈ ಹಿಂದೆಯೂ ಇದೇ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. 2015ರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಮಾಲಾಶ್ರೀ ಬಿರಾದಾರ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವೇಳೆ ಮಾಲಾಶ್ರೀ ಪಾಲಕರಿಂದ ಸಂಸ್ಥೆ ವಿರುದ್ಧ ದೂರು ದಾಖಲಾಗಿತ್ತು. ಆಗ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಂಸ್ಥೆಗೆ ಭೇಟಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. (ದಿಗ್ವಿಜಯ ನ್ಯೂಸ್)