

ಬೆಂಗಳೂರು: ನಿನ್ನೆ (ಜೂ.11) ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣವೊಂದರಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ರನ್ನು ಪೊಲೀಸರು ಬಂಧಿಸಿದ್ದು, ಪ್ರಸ್ತುತ 6 ದಿನಗಳ ಕಾಲ ಕಸ್ಟಡಿಯಲ್ಲಿ ಇರಿಸಲಾಗಿದೆ. ಇನ್ನು ದರ್ಶನ್ ಜತೆಗೆ ಅವರ ಆಪ್ತ ಸ್ನೇಹಿತೆ ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಅನ್ನಪೂರ್ಣೆಶ್ವರಿ ಪೊಲೀಸರು ಬಂಧಿಸಿದ್ದಾರೆ.
ದರ್ಶನ್ರ ಆಪ್ತ ಸ್ನೇಹಿತೆ ನಟಿ ಪವಿತ್ರಾ ಗೌಡಗೆ ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನ ಹತ್ಯೆ ಪ್ರಕರಣದಲ್ಲಿ ದರ್ಶನ್ರನ್ನು ಬಂಧಿಸಲಾಯಿತು. ನಟ ಮತ್ತು ಅವರ ಆಪ್ತರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ, ನ್ಯಾಯಾಲಯಕ್ಕೂ ಹಾಜರುಪಡಿಸಿದರು. ಇನ್ನು ಹತ್ಯೆಯಾದ ಪುತ್ರನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ರೇಣುಕಾಸ್ವಾಮಿ ತಾಯಿ, ದರ್ಶನ್ಗೆ ಹಿಡಿಶಾಪ ಹಾಕಿದ್ದಾರೆ.
ಪುತ್ರನ ಸಾವಿಗೆ ದರ್ಶನ್ ನೇರ ಹೊಣೆ ಎಂದು ದೂರಿದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ, ಆತನಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ದರ್ಶನ್ ಅಭಿನಯದ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಮತ್ತು ಆತನನ್ನು ಚಿತ್ರರಂಗದಿಂದ ಹೊರಗಿಡಬೇಕು ಎಂದು ಕಣ್ಣೀರಿಟ್ಟಿದ್ದಾರೆ.