

ಲಾಹೋರ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾದಾಗಿನಿಂದ ಆಡಿದ ಒಟ್ಟು ಪಂದ್ಯಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿರುವ ಪಾಕಿಸ್ತಾನ ತಂಡಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ, ಲೇವಡಿಗಳು ವ್ಯಕ್ತವಾಗಿವೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಹೀನಾಯವಾಗಿ ಸೋಲುಂಡ ಪಾಕ್ ನಾಯಕ ಬಾಬರ್ ಆಜಂಗೆ ಅಭಿಮಾನಿಗಳು ಮನಬಂದಂತೆ ಟ್ರೋಲ್ ಮಾಡಿ, ಟೀಕಿಸಿದ್ದಾರೆ. ಸದ್ಯ ಇದೆಲ್ಲಾ ತಣ್ಣಗಾಗುವುದರೊಳಗೆ ಪಾಕಿಸ್ತಾನ ಮಾಜಿ ಆಟಗಾರ ಅಹ್ಮದ್ ಶೆಹಜಾದ್ ಹೊರಹಾಕಿದ ಅಸಮಾಧಾನ ಇದೀಗ ಹೊಸ ಕಿಚ್ಚನ್ನೇ ಹಚ್ಚಿದೆ.
ಕಳೆದ ಕೆಲವು ದಿನಗಳಿಂದ ವ್ಯಾಪಕ ಟ್ರೋಲ್, ಟೀಕೆಗಳಿಗೆ ಗುರಿಯಾಗಿರುವ ಪಾಕ್ ಕ್ಯಾಪ್ಟನ್ ಬಾಬರ್ ಆಜಂ ವಿರುದ್ಧ ಅಹ್ಮದ್ ಶೆಹಜಾದ್ ಗುಡುಗಿದ್ದು, "ತಂಡದ ನಾಯಕನಾಗಿ ನೀವು ಏನು ಮಾಡುತ್ತಿದ್ದೀರೋ ನನಗಂತು ತಿಳಿಯುತ್ತಿಲ್ಲ. ಎರಡು ಸುಲಭ ಪಂದ್ಯಗಳನ್ನು ಕೈಚೆಲ್ಲಿದ್ದೀರಾ. ದೊಡ್ಡ ಸ್ಪರ್ಧೆಯಲ್ಲಿ ಕಳಪೆ ಪ್ರದರ್ಶನ ಕಂಡುಕೊಂಡಿರುವ ಪಾಕ್ಗೆ, ಉತ್ತಮ ಪ್ರೋತ್ಸಾಹ, ಬೆಂಬಲ ಬೇಕಿದೆ" ಎಂದಿದ್ದಾರೆ.
"ನಿನ್ನ ಸ್ನೇಹಿತರನ್ನೇ ತಂಡಕ್ಕೆ ಕರೆದುಕೊಳ್ಳುವ ಮೂಲಕ ಜನರನ್ನು ನೀನು ಮೂರ್ಖರನ್ನಾಗಿ ಮಾಡಿದ್ದೀಯಾ. ಬಾಬರ್ ಕ್ಯಾಪ್ಟನ್ ಆದಾಗಿನಿಂದಲೂ ತಂಡದಲ್ಲಿ ಗೆಲುವು ಕಣ್ಮರೆಯಾಗಿದೆ. ದೊಡ್ಡ ಸ್ಪರ್ಧೆಗಳಲ್ಲಿ ಸಾಧಾರಣ ತಂಡಗಳ ಎದುರು ನಾವು ಸೋತಿದ್ದೇವೆ. ಇಲ್ಲಿ ಬಾಬರ್ ಆಜಂ ಅವರ ಸ್ಟ್ರೈಕ್ ರೇಟ್ ಕೂಡ ಕೇವಲ 112 ಇದೆ. ಹೀಗಿದ್ದಮೇಲೆ ನಾಯಕನಾಗಿ ನಿಮ್ಮ ಪಾತ್ರವೇನು?" ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).