300 ರೂ. ಮೌಲ್ಯದ ವಸ್ತುವಿಗೆ ಕೊಟ್ಟಿದ್ದು 6 ಕೋಟಿ ರೂ.! ವ್ಯಾಪಾರಿಯ ಮೋಸಕ್ಕೆ ಕಣ್ಣೀರಿಟ್ಟ ವಿದೇಶಿ ಮಹಿಳೆ

Untitled design - 2024-06-12T095159.589
Published on

ಜೈಪುರ: ಅಮೆರಿಕಾ ಮೂಲದ ಮಹಿಳೆಯೊಬ್ಬರು ಭಾರತ ಪ್ರವಾಸ ಕೈಗೊಂಡಾಗ, ಜೈಪುರದಲ್ಲಿ ವ್ಯಾಪಾರಿಯೊಬ್ಬರ ಬಳಿ ಚಿನ್ನಾಭರಣವೊಂದನ್ನು ಬರೋಬ್ಬರಿ 6 ಕೋಟಿ ರೂ. ಕೊಟ್ಟು ಖರೀದಿಸಿದ್ದರು. ಆದರೆ, ತಾನು ಕೊಂಡುಕೊಂಡಿದ್ದು ಅಸಲಿ ಚಿನ್ನವಲ್ಲ, ಬದಲಿಗೆ ಕೃತಕ ಆಭರಣ ಎಂಬ ಶಾಕಿಂಗ್ ಸಂಗತಿ ತಿಳಿದು ಭಾರೀ ಆಘಾತಕ್ಕೊಳಗಾದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಜೈಪುರ ಮೂಲದ ಅಂಗಡಿಯವರೊಬ್ಬರಿಂದ 300 ರೂ. ಮೌಲ್ಯದ ವಸ್ತುವನ್ನು 6 ಕೋಟಿ ರೂ. ಕೊಟ್ಟು ಖರೀದಿಸಿದ್ದ ಅಮೆರಿಕಾದ ಮಹಿಳೆ, ತಾನು ವ್ಯಾಪಾರಿಯ ಮೋಸದ ಜಾಲಕ್ಕೆ ಸಿಲುಕಿರುವ ವಿಷಯ ತನ್ನ ತಾಯ್ನಾಡಿಗೆ ಮರಳುವವರೆಗೂ ತಿಳಿದುಬಂದಿಲ್ಲ. ಆದ್ರೆ, ಈ ವರ್ಷ ಅಮೆರಿಕಾದಲ್ಲಿ ಏಪ್ರಿಲ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಚೆರಿಶ್ (ಮಹಿಳೆ) ತಮ್ಮ ಬಳಿಯಿದ್ದ ವಸ್ತುಗಳನ್ನು ಪ್ರದರ್ಶಿಸಿದಾಗ ಈ ಹಗರಣ ಬೆಳಕಿಗೆ ಬಂದಿದೆ.

ತಾನು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ, ಗೌರವ್ ಸೋನಿ ಎಂದು ಪತ್ತೆಹಚ್ಚಲಾದ ಜೈಪುರದ ಅಂಗಡಿಯ ಮಾಲೀಕನನ್ನು ಹುಡುಕಿಕೊಂಡು ಆಕೆ ಭಾರತಕ್ಕೆ ಬಂದಿದ್ದರು ಎಂದು ಎನ್​ಡಿಟಿವಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಅಂಗಡಿ ಮಾಲೀಕನನ್ನು ಪ್ರಶ್ನಿಸಲು ಬಂದ ವಿದೇಶಿ ಮಹಿಳೆ, ಕೃತಕ ಆಭರಣಗಳಿಗಾಗಿ ನನ್ನಿಂದ 6 ಕೋಟಿ ರೂ. ಪಾವತಿ ಮಾಡಿಕೊಂಡು, ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಮೇರಿಕನ್ ಮಹಿಳೆ ಚೆರಿಶ್​ ನಿಜವಾದ ಚಿನ್ನದ ಆಭರಣಗಳು ಎಂದು ಊಹಿಸಿ, ಖರೀದಿಸಿದ ವಸ್ತುಗಳು ಅಸಲಿಗೆ ಚಿನ್ನದ ಪಾಲಿಶ್ ಹೊಂದಿರುವ ನಕಲಿ ತುಣುಕುಗಳಾಗಿವೆ. ಇದರ ಬೆನ್ನಲ್ಲೇ ಜೈಪುರ ಪೊಲೀಸರಿಗೆ ದೂರು ಸಲ್ಲಿಸಿರುವ ಮಹಿಳೆ, ಈ ವಿಷಯದಲ್ಲಿ ಯುಎಸ್ ರಾಯಭಾರ ಕಚೇರಿಯ ಸಹಾಯವನ್ನು ಸಹ ಕೋರಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net