ನೀವು ತಪ್ಪೇ ಮಾಡಿಲ್ಲ ಅಂದ್ಮೇಲೆ... ಮತ್ತೊಮ್ಮೆ ತಮ್ಮ ದೇಶದ ವಿರುದ್ಧ ತಿರುಗಿಬಿದ್ದ ಪಾಕ್​ ಮಾಜಿ ಕ್ರಿಕೆಟಿಗ! Danish Kaneria

Danish Kaneria
Published on

Danish Kaneria : ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಮತ್ತೊಮ್ಮೆ ತಮ್ಮದೇ ದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕ್​​ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಕೆಲವೇ ಹಿಂದೂ ಆಟಗಾರರಲ್ಲಿ ಒಬ್ಬರಾದ ಕನೇರಿಯಾ, 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದನ್ನು ನೇರವಾಗಿ ಎತ್ತಿ ತೋರಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ನಿಜವಲ್ಲದಿದ್ದರೆ, ಪ್ರಧಾನಿ ಶೆಹಬಾಜ್ ಷರೀಫ್ ಇನ್ನೂ ಅದನ್ನು ಏಕೆ ಖಂಡಿಸಿಲ್ಲ? ಎಂದು ಕನೇರಿಯಾ ಅವರು ತಮ್ಮ ಎಕ್ಸ್​ ವೇದಿಕೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಪಾಕಿಸ್ತಾನ ಸೇನೆ ಇದ್ದಕ್ಕಿದ್ದಂತೆ ಏಕೆ ಅಲರ್ಟ್​ ಆಗಿದೆ? ಏಕೆಂದರೆ ನಿಮಗೆ ಸತ್ಯ ತಿಳಿದಿದೆ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ. ನೀವು ಭಯೋತ್ಪಾದನೆಯನ್ನು ಹೆಚ್ಚಿಸುತ್ತಿದ್ದೀರಿ. ಇದು ನಿಮಗೆ ನಾಚಿಕೆಗೇಡಿನ ಸಂಗತಿ ಎಂದು ಕನೇರಿಯಾ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮಂಗಳವಾರ ದಾಳಿ ನಡೆದ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ಕನೇರಿಯಾ, ಪಹಲ್ಗಾಮ್ ದಾಳಿಯನ್ನು “ಅನಾಗರಿಕ ದಾಳಿ” ಎಂದು ಖಂಡಿಸಿದರು. ಬಾಂಗ್ಲಾದೇಶದಿಂದ ಬಂಗಾಳ ಮತ್ತು ಕಾಶ್ಮೀರದವರೆಗೆ ಹಿಂದುಗಳನ್ನು ಟಾರ್ಗೆಟ್​ ಮಾಡುವ ಅದೇ ಮನಸ್ಥಿತಿ ಇದೆ. ಆದರೆ, ಈ ಜಾತ್ಯತೀತರು ಮತ್ತು ನ್ಯಾಯಾಂಗವು ದಾಳಿಕೋರರನ್ನು ದಮನಿತ ಅಲ್ಪಸಂಖ್ಯಾತರೆಂದು ಬ್ರಾಂಡ್ ಮಾಡುತ್ತಿದೆ ಎಂದು ಕನೇರಿಯಾ ಅವರು ಟ್ವೀಟ್ ಮಾಡಿದ್ದಾರೆ.

ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದಿರುವ ಕನೇರಿಯಾ, ಪತಿಯನ್ನು ಕಳೆದುಕೊಂಡು, ಮೃತದೇಹದ ಪಕ್ಕದಲ್ಲಿ ಮೌನವಾಗಿ ಕುಳಿತಿರುವ ಮಹಿಳೆಯ ಫೋಟೋವನ್ನು, ಕನೇರಿಯಾ ಅವರು ಹಂಚಿಕೊಂಡಿದ್ದಾರೆ.

2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಆಗ ಸೈನಿಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಇಂದು ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆ ಸುರಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಉತ್ತರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ರಾಜ್ಯಗಳ ಮತ್ತು ನೇಪಾಳ, ಯುಎಇಯ ತಲಾ ಒಬ್ಬರಂತೆ 26 ಪ್ರವಾಸಿಗರನ್ನು ಭಯೋತ್ಪಾದಕರು ಹೆಸರು ಮತ್ತು ಧರ್ಮವನ್ನು ಕೇಳಿ ಕೊಂದು ಹಾಕಿದ್ದಾರೆ.

ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಭಾರತೀಯ ಭದ್ರತಾ ಸಂಸ್ಥೆಗಳು ದಾಳಿಯ ಹಿಂದಿರುವ ಮೂವರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರೆಲ್ಲರೂ ಪಾಕಿಸ್ತಾನಿ ಪ್ರಜೆಗಳಾಗಿದ್ದಾರೆ. ಅವರನ್ನು ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ.

ಈ ದಾಳಿಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತವು ದಾಳಿಕೋರರನ್ನು ನಿರ್ಮೂಲನೆ ಮಾಡುವುದಷ್ಟೇ ಅಲ್ಲ, ಗಡಿಯಾಚೆಯಿಂದ ಈ ಸಂಚು ರೂಪಿಸಿದವರನ್ನು ಬಿಡುವುದಿಲ್ಲ. ಅವರನ್ನು ಸಹ ಬೇಟೆಯಾಡಲಾಗುವುದು ಎಂದು ಪ್ರತಿಜ್ಞೆ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net