

ಹೈದರಾಬಾದ್: ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಷಯಗಳು ಬಹಿರಂಗವಾಗಿದ್ದು, ಪಾಲಕರು ಮತ್ತು ಪ್ರಿಯಕರನ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.
ತೆಲಂಗಾಣದ ಮೈಲಾರ್ದೇವ್ಪಲ್ಲಿ ಮೂಲದ ಲಿಜಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಯ ತಂದೆ ಪರಮೇಶ್ವರ್ ಒಡಿಶಾ ಮೂಲದವರು. 20 ವರ್ಷಗಳ ಹಿಂದೆ ತೆಲಂಗಾಣಕ್ಕೆ ಬಂದು ಲಕ್ಷ್ಮಿಗುಡ ಎಂಬಲ್ಲಿ ನೆಲೆಸಿದ್ದಾರೆ. ಇದೇ ಏರಿಯಾದಲ್ಲಿ ಅಕ್ರಮ್ ಅಲಿಯಾಸ್ ಅಪ್ಸರ್ (20) ಎಂಬಾತನು ಸಹ ವಾಸವಿದ್ದಾನೆ.
ಅಪ್ಸರ್ ಮತ್ತು ಲಿಜಾ ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಒಂದೇ ಏರಿಯಾದವರಾಗಿದ್ದರಿಂದ ಇಬ್ಬರ ಪರಿಚಯ ನಂತರದ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಇಬ್ಬರ ವಿಚಾರ ಲಿಜಾ ಕುಟುಂಬಕ್ಕೆ ತಿಳಿದು ಅಪ್ಸರ್ಗೆ ಎಚ್ಚರಿಕೆಯನ್ನು ನೀಡಲಾಗಿತ್ತು.
ಹೀಗಿದ್ದರೂ ಇಬ್ಬರ ನಡುವೆ ಪ್ರೀತಿ ಮುಂದುವರಿದಾಗಿ ಲಿಜಾ ಕುಟುಂಬದವರು ಆಕೆಯ ತಲೆಯ ಕೂದಲನ್ನು ಕತ್ತರಿಸಿದ್ದರು. ಹೊರಗೆ ಹೋಗದಂತೆ ತಡೆಯಲು ಹೀಗೆ ಮಾಡಿದ್ದರು. ಇದರಿಂದ ಆಕೆ ಖಿನ್ನತೆಗೂ ಒಳಗಾಗಿದ್ದಳು. ಇತ್ತ ಅಪ್ಸರ್ ಸಹ ಕರೆ ಮಾಡಿ ಕಿರುಕುಳ ನೀಡಲು ಆರಂಭಿಸಿದ.
ಮಹಿಳಾ ದಿನಾಚರಣೆಯಂದು ಸುಮಾರು 1 ಗಂಟೆಗಳ ಕಾಲ ಬಾಯ್ಫ್ರೆಂಡ್ ಜತೆ ಮಾತನಾಡಿದ ಲಿಜಾ, ಆ ಬೆನ್ನಲ್ಲೇ ತನ್ನ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮೃತಪಟ್ಟ ಬಳಿಕವೂ ಅಪ್ಸರ್ 135 ಬಾರಿ ಕರೆ ಮಾಡಿದ್ದಾನೆ.
ಮಗಳು ಆತ್ಮಹತ್ಯೆ ಸುದ್ದಿ ತಿಳಿದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಅತ್ತ ಮೊಬೈಲ್ ಫೋನ್ ನೋಡಿದ ಪಾಲಕರಿಗೆ ಅಪ್ಸರ್ ಕರೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಕುಟುಂಬದ ಅಪ್ಸರ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮೈಲಾರ್ದೇವ್ಪಲ್ಲಿ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್)