ಐಪಿಎಲ್ ಆಡಲು ಅರಬ್ ರಾಷ್ಟ್ರಕ್ಕೆ ತೆರಳಿದ ಆರ್‌ಸಿಬಿ, ಸಿಎಸ್‌ಕೆ, ಮುಂಬೈ ಇಂಡಿಯನ್ಸ್

rcb and kohli for web
Published on

ಬೆಂಗಳೂರು: ಕೋವಿಡ್-19ರ ಮಹಾಮಾರಿಯಿಂದಾಗಿ ಮುಂದೂಡಲ್ಪಟ್ಟಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಶುಕ್ರವಾರ ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ದುಬೈಗೆ ಪ್ರಯಾಣ ಬೆಳೆಸಿತು. ಮುಂಬೈನಿಂದ ರೋಹಿತ್ ಶರ್ಮ ಸಾರಥ್ಯದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈನಿಂದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಯುಎಇಗೆ ಪ್ರಯಾಣ ಬೆಳೆಸಿದವು.

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಸ್ವತಃ ವ್ಯವಸ್ಥೆಯೊಂದಿಗೆ ಮುಂಬೈನಿಂದ ದುಬೈಗೆ ತೆರಳಿದರು. ತಂಡದ ಉಳಿದುಕೊಂಡಿರುವ ಹೋಟೆಲ್‌ನಲ್ಲಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ದುಬೈನಲ್ಲಿ ಉಳಿದುಕೊಂಡಿದ್ದರೆ, ರೋಹಿತ್ ಬಳಗ ಮುಂಬೈ ಇಂಡಿಯನ್ಸ್ ಅಬು ಧಾಬಿಯಲ್ಲಿ ಉಳಿದು ಕೊಂಡಿದೆ. ಮೊದಲ ಆರು ದಿನಗಳ ಕಾಲ ಆಟಗಾರರು ಹೋಟೆಲ್‌ನಲ್ಲಿ ಐಸೋಲೇಷನ್ ಅವಧಿ ಕಳೆಯಲಿದ್ದಾರೆ. ಯುಎಇಗೆ ತೆರಳುವುದಕ್ಕೂ ಮೊದಲೇ ಹಲವು ಬಾರಿ ಆಟಗಾರರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಲಿತಾಂಶ ನೆಗೆಟಿವ್ ಬಂದ ಬಳಿಕವಷ್ಟೇ ತಂಡಗಳು ಯುಎಇಯತ್ತ ಪ್ರಯಾಣ ಬೆಳೆಸಿವೆ.

ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್, ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್‌ ತಂಡಗಳು ಗುರುವಾರವೇ ಯುಎಇಗೆ ತೆರಳಿದ್ದು, ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ವಾರಾಂತ್ಯದಲ್ಲಿ ತೆರಳುವ ಸಾಧ್ಯತೆಗಳಿವೆ. ಯುಎಇಯ ದುಬೈ, ಅಬುಧಾಬಿ, ಶಾರ್ಜಾದಲ್ಲಿ 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net