ನಿವೃತ್ತಿ ಪದ ಬಳಕೆ ಬೇಡ, ನಿಮ್ಮ ವಯಸ್ಸಿನ್ನೂ ಚಿಕ್ಕದು, ಸುರೇಶ್ ರೈನಾಗೆ ಪತ್ರ ಬರೆದ ಪ್ರಧಾನಿ ಮೋದಿ

raina with modi for web
Published on

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಗೆ ಶುಕ್ರವಾರವಷ್ಟೇ ಭಾವಪೂರ್ಣ ಪತ್ರ ಬರೆದಿದ್ದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸುರೇಶ್ ರೈನಾಗೂ ಪತ್ರ ಬರೆದಿದ್ದಾರೆ. ಆಗಸ್ಟ್ 15 ರಂದು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೆಲ ಕ್ಷಣಗಳ ನಂತರದಲ್ಲಿ 33 ವರ್ಷದ ರೈನಾ ಕೂಡ ನಿವೃತ್ತಿಯನ್ನು ಪ್ರಕಟಿಸಿದ್ದರು. ‘ನಿಮಗೆ ನಾನು ನಿವೃತ್ತಿ ಎಂಬ ಪದ ಬಳಸುವುದಿಲ್ಲ. ರೈನಾ, ನಿವೃತ್ತಿ ವಯಸ್ಸು ನಿಮ್ಮದಲ್ಲ. ಅಷ್ಟೊಂದು ವಯಸ್ಸು ನಿಮಗೆ ಆಗಿಲ್ಲ’ ಎಂದು ಮೋದಿ ಹೇಳಿದ್ದಾರೆ. ಯುವ ಜನತೆ ಎಂದಿಗೂ ನಿಮ್ಮನ್ನು ಸ್ಮರಿಸುತ್ತಾರೆ. ಕ್ರಿಕೆಟ್ ಜೀವನದಲ್ಲಿ ಎಲ್ಲರಂತೆ ನೀವು ಕೂಡ ಹಲವು ಏಳು-ಬೀಳು ಕಂಡಿದ್ದೀರಿ, ಗಾಯಗಳ ಸಮಸ್ಯೆ ಎದುರಿಸಿದ್ದೀರಿ, ಆ ಎಲ್ಲ ಸವಾಲುಗಳನ್ನು ಧೈರ್ಯವಾಗಿ ಮೆಟ್ಟಿನಿಂತು ಮುಂದೆ ಬಂದಿದ್ದೀರಿ’ ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2011ರ ಏಕದಿನ ವಿಶ್ವಕಪ್ ಪಂದ್ಯ ಸ್ಮರಿಸಿದ ಮೋದಿ

ಅಹಮದಾಬಾದ್‌ನಲ್ಲಿ ನಡೆದ 2011ರ ಏಕದಿನ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲೇ ವೀಕ್ಷಿಸಿದ್ದನ್ನು ಪ್ರಧಾನಿ ಸ್ಮರಿಸಿಕೊಂಡಿದ್ದಾರರೆ. ಈ ಪಂದ್ಯದಲ್ಲಿ ರೈನಾ 28 ಎಸೆತಗಳಲ್ಲಿ ಅಜೇಯ 34 ರನ್ ಸಿಡಿಸಿ, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮೊಟೆರಾ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯವನ್ನು ನಾನು ಕ್ರೀಡಾಂಗಣದಲ್ಲೇ ವೀಕ್ಷಿಸಿದ್ದೆ. ಪಂದ್ಯದ ಮಹತ್ವದ ಘಟ್ಟದಲ್ಲಿ ನಿಮ್ಮ ವಿಕೆಟ್ ಕಾಯ್ದುಕೊಳ್ಳುವ ಜತೆಗೆ ರನ್‌ಗಳ ರೂಪದಲ್ಲಿ ಮಹತ್ವದ ಕೊಡುಗೆ ನೀಡಿದ್ದಿರಿ ಎಂದು ಹೇಳಿದ್ದಾರೆ. ಅಂದು ತಂಡದ ಗೆಲುವಿನಲ್ಲಿ ನಿಮ್ಮ ಪಾತ್ರ ತುಂಬಾ ಮುಖ್ಯವಾಗಿತ್ತು. ಅಂದು ನಿಮ್ಮ ಮೋಹಕ ಕವರ್‌ಡ್ರೈವ್‌ಗೆ ನಾನು ಮಾರು ಹೋಗಿದ್ದೆ. ನನ್ನಂತೆ ನಿಮ್ಮ ಅಭಿಮಾನಿಗಳು ಕೂಡ ನಿಮ್ಮ ಕವರ್‌ಡ್ರೈವ್‌ನ ಸೊಗಸನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಮೋದಿ ಅಂದು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಕೇವಲ ವೈಯಕ್ತಿಕ ಹಿತಾಸಕ್ತಿಗೆ ಆಡದೆ ತಂಡದ ಹಿತಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆಯುತ್ತಿದ್ದ ನೀವು ಪರಿಪೂರ್ಣ ಆಟಗಾರರಾಗಿದ್ದಿರಿ. ಮೈದಾನದಲ್ಲಿ ನೀವು ತೋರುತ್ತಿದ್ದ ಉತ್ಸಾಹ, ಎದುರಾಳಿ ತಂಡದ ವಿಕೆಟ್ ಬಿದ್ದ ವೇಳೆ ನಿಮ್ಮ ಸಂಭ್ರಮ ವರ್ಣಿಸಲು ಪದಗಳು ಸಾಲದು ಎಂದಿದ್ದಾರೆ.

ರೈನಾ ಸಾಮಾಜಿಕ ಕಳಕಳಿಗೆ ಅಭಿನಂದನೆ

ಮಹಿಳಾ ಸಬಲೀಕರಣ, ‘ಸ್ವಚ್ಛ ಭಾರತ ಅಭಿಯಾನ’ದಂಥ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರೈನಾ ಕಾರ್ಯವನ್ನು ಮೋದಿ ಮುಕ್ತಕಂಠದಿಂದ ಶ್ಲಾಸಿದ್ದಾರೆ. ಭಾರತೀಯ ಸಂಸ್ಕೃತಿಯ ಬೇರಿಗೆ ಅಂಟಿಕೊಂಡಿರುವ ನೀವು ಯುವಕರ ಪಾಲಿಗೆ ಆಶಾಕಿರಣವಾಗಿ ಬೆಳೆಯಿರಿ ಎಂದು ಮೋದಿ ಹೇಳಿದ್ದಾರೆ. ಭವಿಷ್ಯದಲ್ಲಿ ನೀವು ಯಾವುದೇ ಕಾರ್ಯ ಮಾಡಿದರೂ ಯಶಸ್ವಿಯಾಗುತ್ತೀರಿ ಎಂದು ಹಾರೈಸಿದ್ದಾರೆ.

ಧನ್ಯವಾದ ಅರ್ಪಿಸಿದ ರೈನಾ

ಮೋದಿ ಅವರ ಪತ್ರಕ್ಕೆ ಟ್ವಿಟರ್ ಮೂಲಕ ಸುರೇಶ್ ರೈನಾ ಧನ್ಯವಾದ ಅರ್ಪಿಸಿದ್ದಾರೆ. ನಾವು ಆಡುವಾಗ ದೇಶಕ್ಕಾಗಿ ಬೆವರು, ರಕ್ತ ಸುರಿಸುತ್ತೇವೆ. ದೇಶದ ಜನರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿಯಿಂದ ಸಿಗುವ ಇಂಥ ಮೆಚ್ಚುಗೆಗಿಂತ ಬೇರಾವುದೂ ಇಲ್ಲ. ನಿಮ್ಮ ಮೆಚ್ಚುಗೆ ಹಾಗೂ ಶುಭಹಾರೈಕೆಗೆ ಧನ್ಯವಾದಗಳು. ಜೈ ಹಿಂದ್ ಎಂದು ರೈನಾ ಸಂದೇಶದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net