ಪ್ರಭಾಸ್​ ಚಿತ್ರಗಳ ಮೇಲೆ ಹೂಡಿಕೆಯಾಗಿರುವ ಮೊತ್ತ 950 ಕೋಟಿಯಂತೆ!

Prabhas - Final
Published on

'ಬಾಹುಬಲಿ' ಎಂಬ ಚಿತ್ರ ಮಾಡಿದ್ದೇ ಮಾಡಿದ್ದು, ಪ್ರಭಾಸ್​ ಅವರ ಸಂಭಾವನೆ, ಅವರ ಚಿತ್ರಗಳ ಗಾತ್ರ ಎಲ್ಲವೂ ದೊಡ್ಡದಾಗಿಬಿಟ್ಟಿದೆ.'ಬಾಹುಬಲಿ' ಚಿತ್ರವನ್ನು ಮೀರಿಸುವುದಕ್ಕೆ ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆ ಲೆವೆಲ್​ಗಾದರೂ ರೀಚ್​ ಆಗಬೇಕು ಎಂದು ಹಲವರು ಪ್ರಯತ್ನಿಸುತ್ತಿರುವಂತಿದೆ.

ಅದೇ ಕಾರಣಕ್ಕೆ, ಪ್ರಭಾಸ್​ ಅವರ ಚಿತ್ರಗಳ ಬಜೆಟ್​ ಏರುತ್ತಲೇ ಇದೆ. ಕೆಲವೇ ವರ್ಷಗಳ ಹಿಂದೆ ಕೆಲವೇ ಕೋಟಿಗಳಲ್ಲಿ ನಿರ್ಮಾಣವಾಗುತ್ತಿದ್ದ ಪ್ರಭಾಸ್​ ಅವರ ಚಿತ್ರಗಳು, ಈಗ ನೂರಾರು ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ ಎಂಬುದು ಗಮನಾರ್ಹ.

ಪ್ರಭಾಸ್​ ಕೈಯಲ್ಲಿ ಇದೀಗ ಮೂರು ಚಿತ್ರಗಳಿದ್ದು, ಈ ಮೂರು ಚಿತ್ರಗಳ ಒಟ್ಟಾರೆ ಬಜೆಟ್​ ಎಷ್ಟಿರಬಹುದು ಎಂಬ ಲೆಕ್ಕಾಚಾರ ಇದೀಗ ಬರೀ ಟಾಲಿವುಡ್​, ಬಾಲಿವುಡ್​ ಅಂತಲ್ಲ ಪ್ಯಾನ್​ ಇಂಡಿಯಾ ಲೆವೆಲ್​ಗೇ ಚರ್ಚೆಯಾಗುತ್ತಿದೆ. ಅದರಂತೆ, ಪ್ರಭಾಸ್​ ಅಭಿನಯದ ಮೂರು ಚಿತ್ರಗಳ ಒಟ್ಟಾರೆ ಬಜೆಟ್​ ಎಷ್ಟು ಗೊತ್ತಾ? 950 ಕೋಟಿ ಎಂದು ಹೇಳಲಾಗುತ್ತಿದೆ.

ಎಲ್ಲಕ್ಕಿಂತ ಮೊದಲು ಪ್ರಭಾಸ್​ ಇದೀಗ 'ರಾಧೇ ಶ್ಯಾಮ್​' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಅರ್ಧ ಆಗಿದ್ದು, ಬಿಡುಗಡೆಯಾಗುವ ಹೊತ್ತಿಗೆ ಬಜೆಟ್​ 300 ಕೋಟಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಆ ನಂತರ, ವೈಜಯಂತಿ ಮೂವೀಸ್​ ನಿರ್ಮಾಣದ ಚಿತ್ರವೊಂದನ್ನು ಪ್ರಭಾಸ್​ ಒಪ್ಪಿಕೊಂಡಿದ್ದು, ಆ ಚಿತ್ರದ ಬಜೆಟ್​ 400 ಕೋಟಿಯಷ್ಟಾಗಲಿದೆಯಂತೆ. ಈ ಚಿತ್ರದಲ್ಲಿ ಅವರಿಗೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇವೆರೆಡರ ಜತೆಗೆ, ಪ್ರಭಾಸ್​ ಇತ್ತೀಚೆಗಷ್ಟೇ 'ಆದಿಪುರುಷ್​' ಎಂಬ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ರಾಮಾಯಣವನ್ನಾಧರಿಸಿದ ಈ ಚಿತ್ರದ ಬಜೆಟ್​ 250 ಕೋಟಿಯಷ್ಟಾಗುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಮೂರೂ ಚಿತ್ರಗಳಿಂದ 950 ಕೋಟಿಯಷ್ಟು ಹೂಡಿಕೆಯಾಗುತ್ತಿದೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net