ಹಾಗಾದ್ರೆ ನಮ್​ ಮಕ್ಳು ಕನಸು ಕಾಣಬಾರ್ದಾ? ಸುನೀಲ್​ ಶೆಟ್ಟಿ ಪ್ರಶ್ನೆ

Suneil Shetty - Final
Published on

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂನ ಚರ್ಚೆ ಜೋರಾಗಿ ನಡೆಯುತ್ತಿದೆ. ಸ್ಟಾರ್ ಮಕ್ಕಳಿಂದಾಗಿ ಹೊರಗಿನ ಪ್ರತಿಭಾವಂತರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೆಲ್ಲದರಿಂದ ಹಿರಿಯ ನಟ ಸುನೀಲ್​ ಶೆಟ್ಟಿ ಬಹಳ ನೊಂದಿದ್ದಾರಂತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಈ ಇಡೀ ಚರ್ಚೆಯ ಬಗ್ಗೆ ಖಾರವಾಗಿ ಮಾತನಾಡಿದ್ದಾರೆ.

'ನೆಪೋಟಿಸಂ ಕುರಿತಾದ ಚರ್ಚೆ ನೋಡಿ ನೋವಾಗುತ್ತಿದೆ. ಇದು ಚಿತ್ರರಂಗ ಮಾತ್ರ ಅಲ್ಲ, ಎಲ್ಲಾ ಫೀಲ್ಡ್​ಗಳಲ್ಲೂ ಇರುವಂತದ್ದೇ. ನಾನು ನಟ ಎಂದ ಮಾತ್ರಕ್ಕೆ ನನ್ನ ಮಗ ಅಥವಾ ಮಗಳು ಈ ಕ್ಷೇತ್ರಕ್ಕೆ ಬರಬೇಕು ಎಂದು ಕನಸು ಕಾಣಬಾರದಾ? ನಾನಿಲಿದ್ದೀನಿ ಅಂತ ನನ್ನ ಮಕ್ಕಳ ಆಸೆ ಬಲಿ ಕೊಡಬೇಕಾ? ಒಬ್ಬ ನಟನ ಮಗ ಅಥವಾ ಮಗಳು, ತಮ್ಮ ತಂದೆಗೆ ಈ ಕ್ಷೇತ್ರದಲ್ಲಿ ಸಿಗುವ ಪ್ರೀತಿ ಮತ್ತು ಅಭಿಮಾನವನ್ನು ಬಹಳ ಹತ್ತಿರದಿಂದ ನೋಡಿರುತ್ತಾರೆ. ತಾನು ಸಹ ತನ್ನ ತಂದೆಯಂತೆಯೇ ಬೆಳೆಯಬೇಕು ಎಂದು ಆಸೆಪಡುತ್ತಾರೆಅದು ತಪ್ಪಾ?' ಎಂದು ಸುನೀಲ್​ ಶೆಟ್ಟಿ ಪ್ರಶ್ನಿಸಿದ್ದಾರೆ.

ತಾವು ಹೊಸಬರಿಗೆ ಎಷ್ಟು ಪ್ರೋತ್ಸಾಹಿಸುತ್ತಿದ್ದೀನಿ ಎಂದು ಹೇಳಿರುವ ಸುನೀಲ್​ ಶೆಟ್ಟಿ, 'ನಾನು ಆನ್​ಲೈನ್​ ಟ್ಯಾಲೆಂಟ್​ ಹಂಟ್​ ನಡೆಸುತ್ತೀನಿ. ಎರಡು ಲಕ್ಷದ 70 ಸಾವಿರ ಮಕ್ಕಳಿಗೆ ವೇದಿಕೆ ಕಲ್ಪಿಸುತ್ತಿದ್ದೇನೆ. ನನ್ನ ಇಬ್ಬರು ಮಕ್ಕಳು ಕೆಲಸಕ್ಕೆ ಪ್ರಯತ್ನಿಸುತ್ತಿದ್ದಾರೆ. ಆ 2.70 ಲಕ್ಷ ಮಕ್ಕಳಿಗೆ ನಾನು ಕೆಲಸ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇದನ್ನ್ಯಾಕೆ ಯಾರೂ ಕೇಳುತ್ತಿಲ್ಲ. ಪ್ರತಿಯೊಬ್ಬರಿಗೂ ಕನಸು ಕಾಣುವುದಕ್ಕೆ ಹಕ್ಕಿದೆ. ಸ್ಟಾರ್​ ಮಕ್ಕಳೋ ಅಲ್ಲವೋ, ಪ್ರತಿಯೊಬ್ಬರಿಗೂ ಅವರದ್ದೇ ಆದ ಕನಸುಗಳಿರುತ್ತವೆ, ಪ್ರತಿಯೊಬ್ಬರಿಗೆ ಸ್ವಂತ ಐಡೆಂಟಿಟಿ ಇರುತ್ತದೆ. ಈ ಗ್ರೂಪಿಸಂ ಎಲ್ಲಾ ಕಡೆ ಇರುತ್ತದೆ. ಆದರೆ, ಅದೆಲ್ಲದರ ಜತೆಗೆ ಬದುಕುವುದಕ್ಕೆ ನಾವು ಕಲಿಯಬೇಕು ' ಎನ್ನುತ್ತಾರೆ ಸುನೀಲ್​ ಶೆಟ್ಟಿ.

ಇನ್ನು ತಮ್ಮ ಬಗ್ಗೆ ಮಾತನಾಡಿಕೊಂಡಿರುವ ಸುನೀಲ್​, 'ನನ್ನ ಕೆರಿಯರ್ ಶುರುವಾಗಿದ್ದು 89ರಲ್ಲಿ. ಆದರೆ, ಮೊದಲ ಚಿತ್ರ ಬಿಡುಗಡೆಯಾಗಿದ್ದು 1992ರಲ್ಲಿ. ಮೊದಲ ಸಿನಿಮಾ ಮುಗಿದರೂ ಬಿಡುಗಡೆಯಾಗಲಿಲ್ಲ. ಇನ್ನೊಂದು ಚಿತ್ರದ ಮುಹೂರ್ತವಾದರೂ ಶುರುವಾಗಲಿಲ್ಲ. ಆ ನಂತರ ಶುರುವಾದ ಚಿತ್ರಗಳು ಬಿಡುಗಡೆಯಾದವು. ನನಗೆ ಚಿತ್ರರಂಗದಲ್ಲಿ ಯಾವ ಗಾಡ್​ಫಾದರ್ ಇರಲಿಲ್ಲ. ಆದರೂ ದೇವರ ದಯೆಯಿಂದ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದೆ. ಕೆಲವು ವಿಮರ್ಶಕರು ನನ್ನನ್ನ ವುಡನ್​ ಎಂದರು. ಅಭಿನಯ ಬಿಟ್ಟು ಹೋಟೆಲ್​ ಬ್ಯುಸಿನೆಸ್​ನಲ್ಲಿ ತೊಡಗಿಸಿಕೊಳ್ಳುವುದು ವಾಸಿ ಎಂದರು. ನಾನು ಧೃತಿಗೆಡಲಿಲ್ಲ. ಅಭಿನಯದ ಬಗ್ಗೆ ಹೆಚ್ಚು ಗಮನ ಹರಿಸಿದೆ. ಒಬ್ಬ ನಟ ಬೆಳೆಯುವುದು ಮತ್ತು ಬೆಳೆಯಬೇಕಾಗಿರುವುದು ಹೀಗೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net