'ಮಿಸ್ಸಿಂಗ್​ ಯುರ್​ ಸ್ಮೈಲ್​' ಎಂದವರಿಗೆ ಬಿಪಾಶಾ ಕೊಟ್ಟ ಉತ್ತರ ಇದು ...

Bipasha Basu - Final
Published on

ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಈ ಕುರಿತು ಹಲವು ನಟಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ಮೀ ಟೂ' ಅಭಿಯಾನ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಈಗ ಈ ವಿಷಯವಾಗಿ ಬಾಲಿವುಡ್​ ನಟಿ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಮಾರ್ಪಕರೊಬ್ಬರು ಹೇಗೆ ತಮ್ಮ ಜತೆಗೆ ಅನುಚಿತವಾಗಿ ವರ್ತಿಸಿದರು ಮತ್ತು ಈ ಕುರಿತು ತಾನೇನು ಮಾಡಿದೆ ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.

'ನಾನಿನ್ನೂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರಲಿಲ್ಲ. ಆಗಾಗ ಒಂದೊಂದು ಅವಕಾಶ ಸಿಗುತ್ತಿತ್ತು ಮತ್ತು ದೊಡ್ಡ ನಿರ್ಮಾಪಕರ ಚಿತ್ರವೊಂದರಲ್ಲಿ ನನಗೆ ಅವಕಾಶ ಸಿಕ್ಕಿತ್ತು. ಅವರ ಜತೆಗೆ ಮಾತಾಡಿಕೊಂಡು ಮನೆಗೆ ಹೋದೆ. ಅಷ್ಟರಲ್ಲಿ ಅವರಿಂದ ನನಗೆ ಒಂದು ಮೆಸೇಜ್​ ಬಂತು. 'ಮಿಸ್ಸಿಂಗ್​ ಯುವರ್​ ಸ್ಮೈಲ್​ ...' ಎಂದು ಬರೆಯಲಾಗಿತ್ತು. ನನಗೆ ಅದನ್ನು ನೋಡಿ ಬಹಳ ವಿಚಿತ್ರ ಎಂದನಿಸಿತು. ಆದರೂ ಸುಮ್ಮನಾದೆ' ಎಂದು ಬಿಪಾಶಾ ಹೇಳಿದ್ದಾರೆ.

ಅದಾಗಿ ಕೆಲವು ದಿನಗಳ ನಂತರ ಮತ್ತೆ ಅದೇ ಮೆಸೇಜ್​ ಬಂತಂತೆ. 'ಅದಾಗಿ ಕೆಲವು ದಿನಗಳ ನಂತರ ಮತ್ತೆ ಮೆಸೇಜ್​ ಬಂತು. ಇನ್ನು ಸುಮ್ಮನೆ ಇದ್ದರೆ, ಇದು ಎಲ್ಲಿಗೋ ಹೋಗಿ ಮುಟ್ಟುತ್ತದೆ ಎಂದನಿಸಿತು. ತಕ್ಷಣ ತಮ್ಮ ಗೆಳತಿಯೊಬ್ಬರಿಗೆ ಒಂದು ಮೆಸೇಜ್​ ಮಾಡಿದ್ದೆ. ಅದರಲ್ಲಿ ಸಾಕಷ್ಟು ಬೈದಿದ್ದೆ. ಆ ಮೆಸೇಜ್​ನ ಬೇಕಂತಲೇ ನಿಮಾರ್ಪಕರಿಗೂ ಕಳಿಸಿದೆ. ಅದನ್ನು ಓದಿದ ನಂತರ ಪುನಃ ಅವರಿಂದ ನನಗೆ ಯಾವ ಸಂದೇಶವೂ ಬರಲಿಲ್ಲ. ಆ ನಂತರ, ಆ ಚಿತ್ರಕ್ಕೆ ಪಡೆದಿದ್ದ ಅಡ್ವಾನ್ಸ್​ನ್ನು ಅವರಿಗೆ ವಾಪಸ್ಸು ಕಳಿಸುವುದಕ್ಕೆ ಸೆಕ್ರೆಟರಿಗೆ ಹೇಳಿದರಂತೆ. ಆದರೆ, ಆ ನಿಮಾರ್ಪಕರು ಅಡ್ವಾನ್ಸ್​ ವಾಪಸ್ಸು ಪಡೆಯಲು ಒಪ್ಪಲಿಲ್ಲ' ಎಂದು ಬಿಪಾಶಾ ಹೇಳಿದ್ದಾರೆ.

ಇದರ ನಂತರ ಒಂದು ಸಮಾರಂಭದಲ್ಲಿ ಬಿಪಾಶಾ ಮತ್ತು ನಿಮಾರ್ಪಕರ ಮುಖಾಮುಖಿಯಾಯಿತಂತೆ. 'ಒಂದು ಇವೆಂಟ್​ನಲ್ಲಿ ಅವರನ್ನು ಮತ್ತೆ ಭೇಟಿ ಮಾಡುವ ಅವಕಾಶ ಸಿಕ್ಕಿತು. ಎಲ್ಲರೂ ವೇದಿಕೆ ಮೇಲೆ ನಿಂತಿದ್ದೆವು. ಅವರು ಸಹ ಬಂದರು. ನನ್ನನ್ನು ನೋಡುತ್ತಿದ್ದಂತೆಯೇ, ಸೀದಾ ಹೋಗಿ ಒಂದು ಮೂಲೆಗೆ ನಿಂತರು. ಅವರನ್ನು ಆ ಸ್ಥಿತಿಯಲ್ಲಿ ನೋಡಿದ್ದು ನಿಜಕ್ಕೂ ಮಜವಾಗಿತ್ತು' ಎಂದು ಬಿಪಾಶಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net