More

    ಕೋವಿಯಿಲ್ಲದೆ ಬೆಳೆನಷ್ಟ, ಪೊಲೀಸ್ ಠಾಣೆಯಲ್ಲಿದೆ ಆಯುಧ, ಹೈಕೋರ್ಟ್ ಆದೇಶವೂ ಲೆಕ್ಕಕ್ಕಿಲ್ಲ

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    ಕೃಷಿ ಕ್ಷೇತ್ರಕ್ಕೆ ಮಂಗಗಳ ಸಹಿತ ಕಾಡುಪ್ರಾಣಿಗಳು ಲಗ್ಗೆಯಿಟ್ಟು ವರ್ಷವಿಡೀ ಕಾಪಾಡಿಕೊಂಡು ಬಂದ ಫಸಲು ಕಾಡುಪ್ರಾಣಿಗಳ ಪಾಲಾಗುತ್ತಿರುವುದನ್ನು ನೋಡಲಾಗದೆ ರೈತರು ಕಂಗಾಲಾಗಿದ್ದಾರೆ. ಯಾವುದೇ ಬೆದರಿಕೆಗೂ ಬಗ್ಗದ ಮಂಗಗಳು ಹಿಂಡುಹಿಂಡಾಗಿ ತೋಟಕ್ಕೆ ಲಗ್ಗೆಯಿಡುತ್ತಿವೆ.
    ಲೋಕಸಭಾ ಚುನಾವಣೆ ನೀತಿ ಸಂಹಿತೆ ಅವಧಿ ಈ ಬಾರಿ ಸುದೀರ್ಘವಾಗಿದ್ದು, ಕೃಷಿಕರು ಪರವಾನಗಿ ಹೊಂದಿದ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿರಿಸಿದ್ದಾರೆ. ಇತ್ತ ಹಾಳಾಗುತ್ತಿರುವ ಫಸಲನ್ನು ನೋಡಲಾಗದೆ ರೈತರು ಪರಿತಪಿಸುತ್ತಿದ್ದಾರೆ. ಸರ್ಕಾರದ ಕೆಲವು ಅಸಂಬದ್ಧ ನಿಯಮದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಚುನಾವಣೆ ಸಂದರ್ಭ ಕೋವಿ ಸಹಿತ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವ ಪದ್ಧತಿಯಿಂದ ವಿನಾಯಿತಿ ಕೋರಿ ದ.ಕ. ಜಿಲ್ಲೆಯ ಕೃಷಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆ ಮನವಿಯನ್ನು ಜಿಲ್ಲಾಡಳಿತ ತಿರಸ್ಕರಿಸಿತ್ತು. ಇದನ್ನು ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಪೊಲೀಸ್ ಠಾಣೆಯಲ್ಲಿರುವ ಕೋವಿಗಳನ್ನು ತಕ್ಷಣ ಹಿಂತಿರುಗಿಸಬೇಕು. ಚುನಾವಣೆ ಸಂದರ್ಭ ಎಲ್ಲ ರೈತರೂ ಕೋವಿಗಳನ್ನು ಪೊಲೀಸ್ ವಶಕ್ಕೆ ನೀಡಬೇಕೆಂದಿಲ್ಲ ಎಂದು ಆದೇಶ ನೀಡಿತ್ತು.

    ಹೈಕೋರ್ಟ್ ಹೇಳಿದ್ದೇನು?

    ಕೋವಿ ಪರವಾನಗಿ ನೀಡುವಾಗಲೇ ಸೂಕ್ತ ತನಿಖೆ ನಡೆಸಿ ಅರ್ಹರಿಗೆ ಮಾತ್ರ ನೀಡುತ್ತದೆ. ಆದ್ದರಿಂದ ಎಲ್ಲರೂ ಠೇವಣಿ ಇಡಬೇಕು ಎಂಬ ಜಿಲ್ಲಾಧಿಕಾರಿ ಆದೇಶ ಸರಿಯಲ್ಲ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕ್ರಿಮಿನಲ್ ಹಿನ್ನೆಲೆಯವರು ಮಾತ್ರ ಬಂದೂಕು ಸಹಿತ ಶಸ್ತ್ರಾಸ್ತ್ರ ಇರಿಸಿಕೊಳ್ಳಬೇಕು. ಆದರೆ ಅಧಿಕಾರಿಗಳು ಸುಲಭ ದಾರಿ ಅನುಸರಿಸುತ್ತಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಕಾನೂನು ಸುವ್ಯವಸ್ಥೆ

    ಮೌಖಿಕವಾಗಿ ಅಥವಾ ಫೋನ್ ಕರೆ ಮೂಲಕ ಶಸ್ತ್ರಾಸ್ತ್ರ ಒಪ್ಪಿಸಲು ಸೂಚಿಸದೆ, ಪತ್ರ ವ್ಯವಹಾರದ ಮೂಲಕ ಸೂಚಿಸಬೇಕು ಎಂದು ಹೈಕೋರ್ಟ್ ಆದೇಶವಿದೆ. ಪ್ರತಿ ಚುನಾವಣೆ ಸಂದರ್ಭ ಅಧಿಕಾರಿಗಳು ಆಯುಧ ಪರವಾನಗಿ ಹೊಂದಿದವರ ಮೌಲ್ಯಮಾಪನ ನಡೆಸಬೇಕು. ಕ್ರಿಮಿನಲ್ ಹಿನ್ನೆಲೆ, ಈ ಹಿಂದೆ ಚುನಾವಣೆ ಸಂದರ್ಭ ಗಲಭೆ ನಡೆಸಿದವರನ್ನು ಗುರುತಿಸಿ ಸಂಭಾವ್ಯ ಅಪಾಯ ತಪ್ಪಿಸಲು, ಅಗತ್ಯ ಮುಂಜಾಗ್ರತೆ ವಹಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶ ಹೊಂದಿರಬೇಕು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    See also  ವರಣನ ಅವಕೃಪೆಗೆ ದಿಕ್ಕೆಟ್ಟ ರೈತರು

    ಅಧಿಕಾರಿಗಳು ಚುನಾವಣಾ ಸಮಯ ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಅರಣ್ಯದಂಚಿನ ರೈತರು, ದುರ್ಬಲ ಸಮುದಾಯಗಳು ಮತ್ತು ವನ್ಯಮೃಗಗಳ ನಡುವೆ ನಡೆಯುವ ಸಂಘರ್ಷ ಪರಿಗಣಿಸಿ ಜನರು ಮತ್ತು ವನ್ಯಜೀವಿಗಳ ಮಧ್ಯೆ ಸಮತೋಲನಕ್ಕೆ ಸ್ಪಷ್ಟ ನಿಲುವು ತಳೆಯಬೇಕು ಎಂದು ಹೈಕೋರ್ಟ್ ಸೂಚಿಸಿದೆ.

    ಉಡುಪಿ ಜಿಲ್ಲೆಯಲ್ಲಿಲ್ಲ ವಿನಾಯಿತಿ

    ಹೈಕೋರ್ಟ್ ಆದೇಶದ ಅನುಸಾರ ದ.ಕ. ಜಿಲ್ಲೆಯಲ್ಲಿ ಅಗತ್ಯವಿರುವ ರೈತರಿಗೆ ಕೋವಿಗಳನ್ನು ವಾಪಸ್ ನೀಡಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ನೀಡುತ್ತಿಲ್ಲ. ಇತ್ತೀಚೆಗೆ ಯಾರೋ ಅಧಿಕಾರಿಗಳು ಕರೆ ಮಾಡಿ ಅಗತ್ಯವಾಗಿ ಕೋವಿ ಬೇಕಾದರೆ ತಿಳಿಸಿ ನೀಡುತ್ತೇವೆ ಎಂದು ಕೇಳಿ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಈ ತನಕ ಕೋವಿ ಮರಳಿಸಿಲ್ಲ ಎಂದು ಕೃಷಿಕ ಮುನಿಯಾಲು ಕಾಡುಹೊಳೆಯ ಆನಂದ ಪೂಜಾರಿ ತಿಳಿಸಿದ್ದಾರೆ.

    ರೈತರು ಮತ್ತು ಸಾಮಾನ್ಯ ಕೃಷಿಕರ ನೋವು ಅರಿತು ನ್ಯಾಯಾಲಯ ಆದೇಶ ನೀಡಿದೆ. ಜಿಲ್ಲಾಡಳಿತ ನ್ಯಾಯಾಲಯದ ಆದೇಶವನ್ನು ಕ್ರಮಬದ್ಧವಾಗಿ ಪಾಲಿಸಬೇಕು. ದ.ಕ. ಜಿಲ್ಲೆಯ ನಿಯಮವನ್ನು ಉಡುಪಿ ಜಿಲ್ಲೆಗೂ ಅನ್ವಯಿಸಬೇಕು. ಸಂಕಷ್ಟದಲ್ಲಿರುವ ರೈತರನ್ನು ಕಾಪಾಡಬೇಕು.
    -ಆನಂದ ಪೂಜಾರಿ, ಕೃಷಿಕ ಮುನಿಯಾಲು

    ಚುನಾವಣೆ ಸಂದರ್ಭ ಕೋವಿಯನ್ನು ಪೊಲೀಸ್ ವಶಕ್ಕೊಪ್ಪಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಅಪರಾಧ ಹಿನ್ನೆಲೆ ಹೊಂದಿದವರಿಂದ ಮಾತ್ರ ಪಡೆದುಕೊಳ್ಳಲು ನಿರ್ದೇಶನವಿದೆ. ಇದಾಗಿಯೂ ಚುನಾವಣಾ ಕಮೀಷನ್ ನಿರ್ದೇಶನಗಳಿಗೆ ವ್ಯತಿರಿಕ್ತವಾಗಿ ಜಿಲ್ಲಾಧಿಕಾರಿ ಕೋವಿ ವಶಕ್ಕೆ ಪಡೆದಿರುವುದು ಕಾನೂನು ಬಾಹಿರ. ಅಧಿಕಾರಿಗಳಿಗೆ ಕೃಷಿಕರ ಸಂಕಷ್ಟದ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ.
    -ಮಾಣಿಮೂಲೆ ಗೋವಿಂದ ಭಟ್, ಕೃಷಿಕರು

    ಯಾರಿಗೆಲ್ಲ ವಿನಾಯಿತಿ ಬೇಕಿದೆಯೋ ಅವರು ಅರ್ಜಿ ನೀಡಬೇಕು. ನಂತರ ಸ್ಥಳ ಪರಿಶೀಲನೆ ನಡೆಸಿ ಅನಿವಾರ್ಯವಾಗಿದ್ದಲ್ಲಿ ವಿನಾಯಿತಿ ನೀಡುತ್ತೇವೆ. ಈಗಾಗಲೇ ಕೆಲವು ಮಂದಿಗೆ ವಿನಾಯಿತಿ ನೀಡಲಾಗಿದೆ.
    -ಡಾ.ಅರುಣ್ ಕೆ., ಪೊಲೀಸ್ ವರಿಷ್ಠಾಧಿಕಾರಿಗಳು ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts