

ವಿಜಯವಾಣಿ ಸುದ್ದಿಜಾಲ ಬೈಂದೂರು
ಹಲವಾರು ವರ್ಷಗಳಿಂದ ಉಪ್ಪು ನೀರಿನ ಹಾವಳಿಯಿಂದ ಕಂಗೆಟ್ಟಿದ್ದ ಬೈಂದೂರು ತಾಲೂಕಿನ ಆರು ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಸುಮನಾವತಿ ನದಿಗೆ ಅಡ್ಡಲಾಗಿ ಪಡುವರಿ ಗ್ರಾಮದ ಸುಬ್ಬರಡಿ ಬಳಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ವೆಂಟೆಡ್ ಡ್ಯಾಂ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ನಾಲ್ಕು ವರ್ಷದ ಹಿಂದೆ ಈ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಸುಮಾರು 230 ಮೀ ಉದ್ದದ ಬೃಹತ್ ಕಿಂಡಿ ಅಣೆಕಟ್ಟು, 2 ಕಿ.ಮೀ. ದೂರದ ಸಂಪರ್ಕ ರಸ್ತೆ ನಿರ್ಮಾಣ, ನದಿಯ ಒಂದು ಬದಿಯಲ್ಲಿ ನದಿದಂಡೆ ಸಂರಕ್ಷಣೆ ಹಾಗೂ ಸುಮಾರು 240 ಮೀ. ಉದ್ದದ ರಿವಿಟ್‌ಮೆಂಟ್ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಿಂಡಿ ಅಣೆಕಟ್ಟಿಗೆ ಯಾಂತ್ರೀಕೃತ ಕ್ರೆಸ್ಟ್‌ಗೇಟ್ ಅಳವಡಿಸಲಾಗಿದೆ.
ನದಿಗೆ ಇನ್ನೊಂದು ಮಗ್ಗಲಲ್ಲಿ ಬೆಸ್ಕೂರು ಭಾಗದಿಂದ ಉಪ್ಪು ನೀರು ಹರಿದು ಬರುವುದರಿಂದ ಅದನ್ನು ತಡೆಗಟ್ಟಲು ಅಲ್ಲಿ ಮತ್ತೊಂದು ಚಿಕ್ಕದಾದ ಕಿಂಡಿಅಣೆಕಟ್ಟು ನಿರ್ಮಾಣ ಮಾಡಿದಾಗ ಮಾತ್ರ ಸುಮನಾವತಿ ನದಿಯಲ್ಲಿ ಹಿನ್ನೀರು ಶೇಖರಣೆಗೊಂಡು ಆರು ಗ್ರಾಮದ ನಿವಾಸಿಗಳಿಗೆ ಉಪಯುಕ್ತವಾಗುತ್ತದೆ. ಈ ಕಾಮಗಾರಿಗೂ ಕೂಡ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸುಮನಾವತಿ ನದಿಯ ಉಪ್ಪು ನೀರಿನ ಹಾವಳಿ ತಪ್ಪಿಸಲು ಸುಬ್ಬರಡಿ ಬಳಿ ವೆಂಟೆಡ್ ಡ್ಯಾಂ ನಿರ್ಮಿಸುವಂತೆ ಈ ಭಾಗದವರು ಹಲವಾರು ವರ್ಷಗಳಿಂದ ಸಂಬಂಧಿತರಿಗೆ ಮನವಿ ಸಲ್ಲಿಸುತ್ತಿದ್ದರು. ಜನರ ಬೇಡಿಕೆಗಳಗೆ ತಕ್ಷಣ ಸ್ಪಂದಿಸಿದ ಸಂಸದ ಬಿ.ವೈ.ರಾಘವೇಂದ್ರ, ಈ ಆರು ಗ್ರಾಮಗಳ ಜನರಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಬ್ಬರಡಿ ಯೋಜನೆಯ ನೀಲಿನಕ್ಷೆ ತಯಾರಿಸಿ ಚಾಲನೆ ನೀಡಿದ್ದೂ ಅಲ್ಲದೇ ವಿಶೇಷ ಮುತುವರ್ಜಿ ವಹಿಸಿ ಕಾಮಗಾರಿ ಗುಣಮಟ್ಟಗಳ ಕುರಿತು ನಿಗಾವಹಿಸಿದ್ದರು. ಪ್ರಸಕ್ತ ಬಹುಕಾಲದ ಬೇಡಿಕೆ ಈಡೇರಿರುವ ಬಗ್ಗೆ ಈ ಭಾಗದ ಜನರು ಸಂಸದರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನದಿಯ ಹಿನ್ನೀರಿನ ಸಂಗ್ರಹಕ್ಕೆ ಅಲ್ಲಲ್ಲಿ ವಾಲ್ ನಿರ್ಮಿಸುವುದು, ನದಿಯಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡು 16 ಕಾಲುವೆಗಳಿದ್ದು ಅದರ ಹೂಳೆತ್ತಲು ಅಗತ್ಯ ಕ್ರಮ ಕೈಗೊಂಡರೆ ಮಾತ್ರ ಅಣೆಕಟ್ಟಿನಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಹಲವಾರು ವರ್ಷಗಳಿಂದ ಸುಮನಾವತಿ ನದಿಯ ಉಪ್ಪು ನೀರಿನಿಂದಾಗಿ ನದಿ ಪಾತ್ರದ ಪಡುವರಿ, ತಗ್ಗರ್ಸೆ, ಬಿಜೂರು, ಯಡ್ತರೆ, ಉಪ್ಪುಂದ, ಬೈಂದೂರು ಗ್ರಾಮದ ನಿವಾಸಿಗಳು ಕಂಗೆಟ್ಟಿದ್ದರು. ಒಂದು ಅಂದಾಜಿನ ಪ್ರಕಾರ ಇಲ್ಲಿನ ಆರು ಗ್ರಾಮಗಳಲ್ಲಿ ಸುಮಾರು 500 ಎಕರೆಗೂ ಉಪ್ಪು ನೀರು ತಡೆಯುವ ಬೃಹತ್ ಕಿಂಡಿ ಅಣೆಕಟ್ಟು ಇದಾಗಿದೆ. ಸುಮಾರು 230 ಮೀ. ಉದ್ದ ಹೊಂದಿದ್ದು, ಸುಮಾರು 35 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದೆ.-ಗುರುರಾಜ್ ಗಂಟಿಹೊಳೆ, ಶಾಸಕರು ಬೈಂದೂರು
ಪ್ರಸ್ತುತ ಸುಮಾರು 35 ಕೋಟಿ ರೂ.ವೆಚ್ಚದಲ್ಲಿ 230ಮೀ ಉದ್ದದ ಬೃಹತ್ ಕಿಂಡಿ ಅಣೆಕಟ್ಟು 2 ಕಿ.ಮೀ ದೂರದ ಸಂಪರ್ಕ ರಸ್ತೆ ನಿರ್ಮಾಣ, ನದಿಯ ಬದಿಯಲ್ಲಿ ನದಿದಂಡೆ ಸಂರಕ್ಷಣೆ ಹಾಗೂ ಸುಮಾರು 240ಮೀ ಉದ್ದದ ರಿವಿಟ್‌ಮೆಂಟ್, ನೂತನ ಕಿಂಡಿ ಅಣೆಕಟ್ಟಿಗೆ ಯಾಂತ್ರೀಕೃತ ಕ್ರೆಸ್ಟ್‌ಗೇಟ್ ಅಳವಡಿಸುವುದು ಸೇರಿದಂತೆ ಬಹುತೇಕ ಎಲ್ಲ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯ ಸಾಕಾರದಿಂದ ಉಪ್ಪು ನೀರು ತಡೆಗೆ ಅನೂಕೂಲವಾಗಿದ್ದು, ನದಿಪಾತ್ರ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ಸಾಧ್ಯತೆಯಿದೆ.-ಪುನೀತ್, ಅಭಿಯಂತರರು ಸಣ್ಣ ನೀರಾವರಿ ಇಲಾಖೆ