

ಕೊಪ್ಪಳ: ಡ್ರೈವರ್ ಒಬ್ಬ ಹಣಕ್ಕಾಗಿ ತನ್ನ ಮಾಲೀಕನ ಮಗನನ್ನೇ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ನಡೆದಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಜ್ಬಲ್(15) ಕೊಲೆಯಾದ ಬಾಲಕ. ಕುಕನೂರು ಪಟ್ಟಣ ನಿವಾಸಿ ಶಂಕರ್ ಆರೋಪಿ. ಇದನ್ನೂ ಓದಿ: 4 ತಿಂಗಳ ಮಗುವಿನ ಪಕ್ಕ ಹೆಡೆ ಬಿಚ್ಚಿದ ವಿಷ ಸರ್ಪ; ಕಂದಮ್ಮನ ಪ್ರಾಣ ಉಳಿಸಲು ತಾಯಿ ಮಾಡಿದ್ದೇನು?
ಆರೋಪಿ ಶಂಕರ್ ಅಪ್ರಾಪ್ತ ವಯಸ್ಸಿನ ಬಾಲಕರಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿ ವಿಡಿಯೋ ಮಾಡುತ್ತಿದ್ದ. ಬಳಿಕ ಅವರನ್ನು ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದ. ಇದೇ ಕೃತ್ಯವನ್ನು ತನ್ನ ಮಾಲೀಕನ ಮಗನ ಮೇಲೂ ಎಸಗಿದ್ದ. ಕೊನೆಗೆ ಹಣ ನೀಡಲು ಹಿಂದೇಟು ಹಾಕಿದ್ದರಿಂದ ಪ್ರಜ್ವಲ್ನನ್ನು ಬಾವಿಯಲ್ಲಿ ಮುಳುಗಿಸಿ ಶಂಕರ್ ಕೊಲೆ ಮಾಡಿದ್ದಾನೆ. ಬಳಿಕ ಈಜಲು ಹೋದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮನೆಯವರಿಗೆ ತಿಳಿಸಿದ್ದ.
ಕೊಲೆ ಮಾಡಿರುವುದನ್ನು ಗಮನಿಸಿದ್ದ ಪ್ರತ್ಯಕ್ಷದರ್ಶಿಗಳಿಗೆ ಶಂಕರ್ ಬೆದರಿಕೆ ಹಾಕಿದ್ದ. ಬಳಿಕ ತನ್ನ ಕಾರಿನ ಮಾಲೀಕನಿಗೆ ಕರೆ ಮಾಡಿ, ನಿಮ್ಮ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾನೆ. ಪುತ್ರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪಾಲಕರು ಪೊಲೀಸರ ಮೊರೆ ಹೋಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಂಕರ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಿದ್ದ ಶಂಕರ್, ಹಣ ನೀಡದಿರುವುದಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ.