ನವದೆಹಲಿ: ಜೆಎನ್.1 ರೂಪಾಂತರ ಕರೊನಾ ಪ್ರಕರಣಗಳ ಏರಿಕೆಯೊಂದಿಗೆ ಭಾರತದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರ (ಡಿಸೆಂಬರ್ 22) ಹೆಚ್ಚಳ ಕಂಡಿದೆ. ಶುಕ್ರವಾರ ದೇಶದಲ್ಲಿ 640 ತಾಜಾ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆಯು ಹಿಂದಿನ ದಿನದಲ್ಲಿದ್ದ 2,669 ರಿಂದ 2,997 ಕ್ಕೆ ಹೆಚ್ಚಳ ಕಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳದಿಂದ ಮತ್ತೊಂದು ಸಾವು ಕೂಡ ವರದಿಯಾಗಿದೆ. ಡಿಸೆಂಬರ್ 21 ರವರೆಗೆ ಭಾರತದಲ್ಲಿ ಒಟ್ಟು ಜೆಎನ್.1 ರೂಪಾಂತರದ 22 ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳು 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದನ್ನು ತೋರಿಸಿವೆ.
ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ ಇವುಗಳಲ್ಲಿ ಸೇರಿವೆ.
ಒಡಿಶಾ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಬಾರಿ ಯಾವುದೇ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ.
ಏತನ್ಮಧ್ಯೆ, ಚಂಡೀಗಢ ಆಡಳಿತವು ಕೋವಿಡ್-19 ರ JN.1 ರೂಪಾಂತರ ಹರಡುವಿಕೆಗೆ ಸಂಬಂಧಿಸಿದಂತೆ ಸಲಹಾ ಮಾರ್ಗದರ್ಶಿಗಳನ್ನು ಹೊರಡಿಸಿದೆ. ಇದರ ಅನುಸಾರ, ಆಸ್ಪತ್ರೆಗಳಲ್ಲಿ ಅಟೆಂಡರ್‌ಗಳು, ವೈದ್ಯರು ಮತ್ತು ಇತರ ಆಸ್ಪತ್ರೆಯ ಸಿಬ್ಬಂದಿಯು ಮಾಸ್ಕ್ ಧರಿಸುವುದು ಈಗ ಕಡ್ಡಾಯವಾಗಿದೆ.
ಬಿಎಸ್ಇ ಸೂಚ್ಯಂಕ ಶೇ. 0.34 ಏರಿಕೆ: ಯಾವ ಷೇರುಗಳಿಗಿದೆ ಬೇಡಿಕೆ? 3 ದಿನ ವಹಿವಾಟು ಇಲ್ಲವೇಕೆ?