ಕಾಸರಗೋಡು: ಹದಿನೆಂಟು ವರ್ಷಗಳ ಹಿಂದೆ ಕೊಲೆಯಾಗಿರುವ ಮೂಲತಃ ಕೊಡಗು ಅಯ್ಯಂಗೇರಿ ನಿವಾಸಿ ಸಫಿಯಾ ಎಂಬುವರ ತಲೆಬುರುಡೆ ಸೇರಿ ಅಸ್ಥಿಪಂಜರವನ್ನು ಆಕೆಯ ಪಾಲಕರಿಗೆ ಒಪ್ಪಿಸಲು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಾನು ಎಸ್.ಪಣಿಕ್ಕರ್ ಆದೇಶಿಸಿದ್ದಾರೆ.
ಸಫಿಯಾರ ತಲೆಬುರುಡೆ ಸೇರಿದಂತೆ ಅಸ್ಥಿಪಂಜರವನ್ನು ನ್ಯಾಯಾಲಯ ಪ್ರಧಾನ ಪುರಾವೆಯನ್ನಾಗಿ ಪರಿಗಣಿಸಿ, ಇಂದಿಗೂ ಸಂರಕ್ಷಿಸಿಟ್ಟುಕೊಳ್ಳಲಾಗಿದೆ. ಇದರ ಅಂತ್ಯಸಂಸ್ಕಾರ ನಡೆಸಲು ಬಿಟ್ಟುಕೊಡುವಂತೆ ಸಫಿಯಾರ ತಂದೆ ಮೊಯ್ದು ಹಾಗೂ ತಾಯಿ ಆಯಿಷಮ್ಮ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿ ಪರಿಶೀಲಿಸಿ ಈ ಆದೇಶ ನೀಡಿದೆ. ನ್ಯಾಯಾಲಯದ ಮುಖಾಂತರ ನ. 7ರಂದು ಅಸ್ಥಿಪಂಜರವನ್ನು ಸಫಿಯಾ ಪಾಲಕರು ಪಡೆದುಕೊಳ್ಳಲಿದ್ದಾರೆ.
ಮುಳಿಯಾರು ನಿವಾಸಿ ಹಾಗೂ ಗೋವಾದಲ್ಲಿ ನಿರ್ಮಾಣ ಗುತ್ತಿಗೆದಾರನಾಗಿದ್ದ ಕೆ.ಸಿ.ಹಂಸ ಮತ್ತು ಆತನ ಪತ್ನಿ ಮೈಮುನಾ ಗೋವಾದಲ್ಲಿರುವ ಅವರ ಮನೆ ಕೆಲಸಕ್ಕೆ 2006ರಲ್ಲಿ ಸಫಿಯಾಳನ್ನು ಕರೆದೊಯ್ದು ದೈಹಿಕ ಹಿಂಸೆ ನೀಡಿದ್ದರು. ಅಲ್ಲದೆ ಆಕೆಯ ಮೈಮೇಲೆ ಬಿಸಿ ನೀರು ಬಿದ್ದ ಪರಿಣಾಮ ಅಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಆಕೆಯನ್ನು ಕೊಲೆಗೈದು ಮೃತದೇಹ ತುಂಡರಿಸಿ ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟಿನ ಬಳಿ ದಫನ ಮಾಡಿರುವ ಬಗ್ಗೆ ಕೇಸ್ ದಾಖಲಾಗಿತ್ತು.
ಇದಕ್ಕೂ ಮೊದಲು ಸಫಿಯಾ ನಾಪತ್ತೆಯಾಗಿರುವ ಬಗ್ಗೆ ಆದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕ್ರೈಂ ಬ್ರಾಂಚ್ ನಡೆಸಿದ ತನಿಖೆಯಿಂದ 2008 ಜೂ.5ರಂದು ಅಣೆಕಟ್ಟು ಸನಿಹದಿಂದ ಸಫಿಯಾಳ ಅಸ್ಥಿಪಂಜರ ಪತ್ತೆಚ್ಚಲಾಗಿತ್ತು. ಪ್ರಕರಣದ ಅಪರಾಧಿಗಳಿಗೆ ಕಾಸರಗೋಡು ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ನಂತರ ಈ ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿಸಿತ್ತು.