ಉಳ್ಳಾಲ: ಸೋಮೇಶ್ವರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಕಡಲ್ಕೊರೆತ ಸಮಸ್ಯೆ ಎದುರಾಗಿದೆ. ಮರಳುಗಾರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಕಿಶೋರ್ ಉಚ್ಚಿಲ್ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಳ್ಳಾಲ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮೇಶ್ವರ ಕಡಲ ತೀರದಲ್ಲಿ ನಿರಂತರ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿಯೆತ್ತಿ ಹೋರಾಟ ನಡೆಸುವವರ ಮೇಲೆ ಹಲ್ಲೆ ನಡೆಸುವವನ್ನ ಪೊಲೀಸ್ ಇಲಾಖೆ ಮಟ್ಟ ಹಾಕಬೇಕು. ಸೋಮೇಶ್ವರ ಕಡಲ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.
ಅಕ್ರಮ ಮರಳುಗಾರಿಕೆಯಿಂದ ಕಡಲ್ಕೊರೆತ ತೀವ್ರಗೊಂಡು ಅನೇಕ ಮನೆಗಳು ಸಮುದ್ರ ಪಾಲಾಗಿವೆ. ಬೋವಿ ಸಮಾಜದ ಹಿರಿಯ ಮುಖಂಡ, ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಮೇಲಿನ ಹಲ್ಲೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೀಪಕ್ ಪಿಲಾರ್, ಸುಂದರ ಚೆಂಬುಗುಡ್ಡೆ, ಮೊಗವೀರ ಸಮಾಜ ಮುಖಂಡರಾದ ಪ್ರೇಮ್ ನಾಥ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಕಾರ್ಯದರ್ಶಿ ರಕ್ಷಿತ್ ಪೂಜಾರಿ ಗೋಷ್ಠಿಯಲ್ಲಿದ್ದರು.