

ಬೆಳ್ತಂಗಡಿ: ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಚಾರ್ಮಾಡಿ ಘಟಕ ವತಿಯಿಂದ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಬೃಹತ್ ಪ್ರತಿಭಟನೆ ಚಾರ್ಮಾಡಿ ಗ್ರಾಮ ಪಂಚಾಯಿತಿ ವಠಾರದಲ್ಲಿ ಮಂಗಳವಾರ ನಡೆಯಿತು.
ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ಕೈಬಿಡಬೇಕು. ಪಶ್ಚಿಮಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು. ಕೃಷಿಭೂಮಿಗೂ ಅರಣ್ಯ ಭೂಮಿಯ ನಡುವೆ ಆನೆ ಕಂದಕ ನಿರ್ಮಾಣವಾಗಬೇಕು. ಪಶ್ಚಿಮಘಟ್ಟಕ್ಕೆ ಬರುವ ಅರಣ್ಯ ಸಂರಕ್ಷಣಾ ಕಾಯ್ದೆ ಕೃಷಿ ಭೂಮಿ, ಜನವಸತಿ ಪ್ರದೇಶ ಮತ್ತು ಮೂಲಸೌಕರ್ಯಕ್ಕೆ ಅನ್ವಯಿಸಬಾರದು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ನಡೆಯಬೇಕು. ರೈತರಿಗೆ ಕೋವಿ ಪರವಾನಗಿ ನೀಡಬೇಕು. ಪಶ್ಚಿಮಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮಘಟ್ಟ ಪ್ರದೇಶದ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ವಿಶೇಷ ಗ್ರಾಮಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು ಎಂಬ ಬೇಡಿಕೆಗಳನ್ನು ಗ್ರಾಮಮಟ್ಟದಲ್ಲಿ ಸಲ್ಲಿಸಲಾಯಿತು.
ಮಲೆನಾಡು ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಶಿರಾಡಿ, ಮಲೆನಾಡು ಹಿತರಕ್ಷಣಾ ವೇದಿಕೆಯ ಜನ ಸಂಪರ್ಕ ಸಮಿತಿ ಸದಸ್ಯ ಕರುಣಾಕರ ಶಿಶಿಲ, ಮಲೆನಾಡು ಹಿತರಕ್ಷಣಾ ವೇದಿಕೆಯ ಚಾರ್ಮಾಡಿ ಗ್ರಾಮ ಸಮಿತಿ ಸಂಚಾಲಕ ಕೃಷ್ಣ ರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಎ. ಉಪಸ್ಥಿತರಿದ್ದರು.