ಬೆಂಗಳೂರು: ಗುತ್ತಿಗದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ರಾಜಾರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾತಿ ನಿಂದನೆ ಪ್ರಕರಣ ಸಂಬಂಧ ಶಾಸಕ ಮುನಿರತ್ನ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 82ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಇಬ್ಬರ ಶ್ಯೂರಿಟಿ, 2 ಲಕ್ಷ ರೂ. ಬಾಂಡ್, ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಹಾಗೂ ನಾಶ ಮಾಡಬಾರದು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಮುನಿರತ್ನ ಅವರು ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ನಿನ್ನೆ (ಸೆಪ್ಟೆಂಬರ್ 18) ವಾದ ಪ್ರತಿವಾದ ಆಲಿಸಿದ್ದ ಕೋರ್ಟ್, ಇಂದಿಗೆ (ಸೆಪ್ಟೆಂಬರ್ 19) ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್-ಪಾಕಿಸ್ತಾನದ ಅಜೆಂಡಾ ಒಂದೇ, ಮೋದಿ ಸರ್ಕಾರ ಇರೋವರೆಗೂ ಇದು ಸಾಧ್ಯವಿಲ್ಲ: ಅಮಿತ್ ಷಾ
ಜಾತಿ ನಿಂದನೆ ಆರೋಪದಡಿ ಜೈಲು ಸೇರಿರುವ ಶಾಸಕ ಮುನಿರತ್ನಗೆ ಜಾಮೀನು ದೊರೆತರೂ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬರ ಮೇಲೆ ರಾಮನಗರದ ಬಳಿ ಇರುವ ಖಾಸಗಿ ರೆಸಾರ್ಟ್ನಲ್ಲಿ ಅತ್ಯಾಚಾರ ಎಸಗಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಡಿವೈಎಸ್ಪಿ ದಿನಕರ್ ಶೆಟ್ಟಿ ಅವರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸಿದ್ದಾರೆ.
ಸಮಾಜ ಸೇವಕಿಯಾಗಿ, ಬಿಜೆಪಿಯಲ್ಲೂ ಗುರುತಿಸಿಕೊಂಡಿರುವ ತನ್ನ ಮೇಲೆ 2020ರಿಂದ 2022ರವರೆಗೆ ಅತ್ಯಾಚಾರ ನಡೆಸಿ ಹನಿಟ್ರ್ಯಾಪ್ ಗೆ ಬಳಸಿಕೊಂಡಿರುವ ಕುರಿತು ದೂರು ನೀಡಿದ್ದಾರೆ. ದೂರು ಪರಿಶೀಲಿಸಿದ ನಂತರ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ನೀಡಿದ ಹೇಳಿಕೆ ಆಧರಿಸಿ ಶಾಸಕ ಮುನಿರತ್ನ, ನ್ ಮ್ಯಾನ್ ವಿಜಯ್ ಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಸೇರಿದಂಕೆ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಜೆಪಿ ಪಾರ್ಕ್ ಬಳಿ ಇರುವ ಗೋಡೌನ್ನಲ್ಲಿ ಸ್ಥಳ ಮಹಜರು ಮಾಡಲಾಗಿದ್ದು, ಅತ್ಯಾಚಾರ ಪ್ರಕರಣ ಸಂಬಂಧ ಶಾಸಕ ಮುನಿರತ್ನರನ್ನು ರಾಮನಗರ ಪೊಲೀಸರು ಬಂಧಿಸುವ ಸಾಧ್ಯತೆ ಹೆಚ್ಚಿದೆ.