

ನವದೆಹಲಿ: ನೋಯ್ಡಾದ ದಂಕೌರ್ ಕೊತ್ವಾಲಿ ಪ್ರದೇಶದ ಜಗನ್ಪುರ ಗ್ರಾಮದಲ್ಲಿ ವರದಕ್ಷಿಣೆಯಾಗಿ ಪಡೆದಿದ್ದ ಫಾರ್ಚುನರ್ ಮಾರಾಟ ಮಾಡುವ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳವಾಗಿದ್ದು, ಪತಿ ಪತ್ನಿಯನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ.
ಮೂಲತಃ ಧನಪುರ ಗ್ರಾಮದ ದೀಪಕ್ ಭದಾನ 12 ವರ್ಷಗಳಿಂದ ಕುಟುಂಬ ಸಮೇತ ಜಗನ್ಪುರದಲ್ಲಿ ವಾಸವಿದ್ದು, ನಾಲ್ಕು ವರ್ಷದ ಹಿಂದೆ ದೆಹಲಿಯ ಸರಾಯ್ ಕಾಲೇಖಾನ್ನ ನಿಧಿ ಅವರನ್ನು ವಿವಾಹವಾಗಿದ್ದ. ಇಬ್ಬರಿಗೂ ಎರಡು ವರ್ಷದ ಮಗ ಮತ್ತು ಒಂದು ತಿಂಗಳ ಹೆಣ್ಣು ಮಗುವಿದೆ. ನಿಧಿಯ ತಂದೆ ಹರ್ವೀರ್ ಸಿಂಗ್ ತಮ್ಮ ಮಗಳನ್ನು ಬಹಳ ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟಿದ್ದರು. ವರದಕ್ಷಿಣೆಯಾಗಿ ಹಣ, ಆಭರಣಗಳ ಜೊತೆಗೆ 45 ಲಕ್ಷ ಮೌಲ್ಯದ ಫಾರ್ಚುನರ್ ಕಾರನ್ನು ನೀಡಲಾಗಿತ್ತು.
ಶನಿವಾರ ಬೆಳಗ್ಗೆ ದಂಪತಿ ನಡುವೆ ಫಾರ್ಚುನರ್ ಮಾರಾಟ ಮಾಡುವ ವಿಚಾರವಾಗಿ ಜಗಳವಾಗಿತ್ತು. ಈ ಸಂದರ್ಭದಲ್ಲಿ ದೀಪಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಬಂದೂಕು ಕೈಗೆತ್ತಿಕೊಂಡು ಪತ್ನಿಯನ್ನು ಗುಂಡಿಕ್ಕಿ ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಮೃತ ನಿಧಿ ತವರು ಮನೆ ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರು ಉದ್ರುಕ್ತರನ್ನು ನಿಯಂತ್ರಿಸಿದರು. ಪತಿ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.