

ನವದೆಹಲಿ: ವಿಶ್ವವನ್ನು ಕಾಡುತ್ತಿರುವ ಕರೊನಾ ಮಹಾಮಾರಿ ನಿವಾರಣೆಗೆ ಭಾರತದಲ್ಲಿ ತಯಾರಾಗಿರುವ ಎರಡು ಲಸಿಕೆಗಳ ತುರ್ತು ಬಳಕೆಗೆ ತಜ್ಞರ ಸಮಿತಿ ಹಸಿರು ನಿಶಾನೆ ತೋರಿದ ಬೆನ್ನಲ್ಲೇ, ಭಾರತ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಕೂಡ ಭಾನುವಾರ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೂಲಕ ಕರೊನಾ ಲಸಿಕೆಗಾಗಿ ಭಾರತದ ಕಾಯುವಿಕೆ ಅಂತ್ಯಗೊಂಡಂತಾಗಿದೆ. ಜತೆಗೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತ ಬಹುತೇಕ ನಿರ್ಣಾಯಕ ಹಂತಕ್ಕೆ ತಲುಪಿದೆ.
ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಜಂಟಿಯಾಗಿ ತಯಾರಿಸಿರುವ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ ಹಾಗೂ ಆಕ್ಸ್ಫರ್ಡ್-ಅಸ್ಟ್ರಾಜೆನಿಕಾದ ಕೋವಿಶೀಲ್ಡ್ ತುರ್ತು ಬಳಕೆಗೆ ಭಾನುವಾರ ಅನುಮೋದನೆ ಸಿಕ್ಕಿದೆ. ದೇಶಾದ್ಯಂತ ಶನಿವಾರ ಲಸಿಕೆ ನೀಡಿಕೆ ತಾಲೀಮು ಯಶಸ್ವಿ ಯಾಗಿ ನಡೆದಿರುವ ಕಾರಣ ಅತಿ ಶೀಘ್ರದಲ್ಲೇ ಈ ಲಸಿಕೆಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.
ಯಾವಾಗ ಬಳಕೆಗೆ ಸಿಗಬಹುದು?: ಈಗಷ್ಟೇ ಭಾರತೀಯ ಔಷಧ ಪ್ರಾಧಿಕಾರ ಲಸಿಕೆಗಳಿಗೆ ಅನುಮತಿ ನೀಡಿದೆ. ಲಸಿಕೆ ಉತ್ಪಾದಕ ಕಂಪನಿಯಿಂದ ಕೇಂದ್ರ ಸರ್ಕಾರ ಇವುಗಳನ್ನು ಖರೀದಿ ಮಾಡಿ, ನಿಗದಿತ ಲಸಿಕಾ ಕೇಂದ್ರಕ್ಕೆ ರವಾನೆ ಮಾಡಬೇಕು. ನಂತರ ಲಸಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಲಸಿಕೆಗೆ ಕೌಂಟ್ಡೌನ್: ಕರೊನಾ ವಿರುದ್ಧ ಹೋರಾಟದ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಬಳಿಕ ಸಾರ್ವಜನಿಕರು ಲಸಿಕೆ ಪಡೆಯಬಹುದು. ಹೀಗಾಗಿ ಇನ್ನು ಒಂದೆರಡು ವಾರದಲ್ಲಿ ಲಸಿಕೆ ಬಳಕೆಗೆ ಸಿಗುವ ಸಾಧ್ಯತೆ ಇದೆ.
ಶೇ. 110 ಸುರಕ್ಷಿತ: ಎರಡೂ ಲಸಿಕೆಗಳು ಶೇ. 110ರಷ್ಟು ಸುರಕ್ಷಿತವಾಗಿವೆ. ಔಷಧ ಸುರಕ್ಷತೆ ಕುರಿತು ಒಂದು ಅಂಶದಷ್ಟು ಅನುಮಾನವಿದ್ದರೂ ನಾವು ಅನುಮೋದನೆ ನೀಡುತ್ತಿರಲಿಲ್ಲ ಎಂದು ಡಿಸಿಜಿಐ ವಿ.ಜಿ. ಸೋಮಾನಿ ಹೇಳಿದ್ದಾರೆ. ಕೋವಿಶೀಲ್ಡ್ ಶೇಕಡ 70.42ರಷ್ಟು ಪರಿಣಾಮಕಾರಿಯಾಗಿದೆ. ಕೊವ್ಯಾಕ್ಸಿನ್ ಸುರಕ್ಷಿತವಾಗಿದ್ದು, ರೋಗನಿರೋಧಕತೆಯನ್ನು ಅಗಾಧವಾಗಿ ಹೆಚ್ಚಿಸುತ್ತದೆ. ಈ ಲಸಿಕೆಯಿಂದ ದೇಹದಲ್ಲಿ ದುರ್ಬಲತೆ ಉಂಟಾಗುತ್ತದೆ ಎಂಬುದು ವದಂತಿ ಮಾತ್ರ. ಇವುಗಳಿಗೆ ಕಿವಿಗೊಡಬೇಡಿ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವಿಶ್ವದ ಬಹುತೇಕ ರಾಷ್ಟ್ರಗಳು ಸುರಕ್ಷಿತವಾದ ಕರೊನಾ ಲಸಿಕೆ ಪಡೆಯಲು ಪರದಾಡುತ್ತಿರುವ ನಡುವೆಯೇ ಎರಡು ಲಸಿಕೆಗೆ ಭಾರತ ಒಪ್ಪಿಗೆ ನೀಡಿರುವುದು ಮಹತ್ವದ ಸಂಗತಿಯಾಗಿದೆ. ಈ ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾಗಲಿದ್ದು, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕಾರಿಯಾಗಿವೆ. ಜತೆಗೆ ಸ್ವದೇಶಿಯಾಗಿ ಲಸಿಕೆ ತಯಾರಿಸುವುದರಿಂದ ವೆಚ್ಚ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಪ್ರಸ್ತುತ 20ಕ್ಕೂ ಅಧಿಕ ದೇಶಗಳು ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿದ್ದು, ಅಮೆರಿಕ, ಬ್ರಿಟನ್ ಹೊರತುಪಡಿಸಿ ಬಹುತೇಕ ರಾಷ್ಟ್ರಗಳು ಔಷಧವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿವೆ.
ಕಡ್ಡಾಯ ಅಲ್ಲ: ಕರೊನಾ ಲಸಿಕೆಯನ್ನು ಪಡೆಯುವುದು ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಮುನ್ನೆಚ್ಚರಿಕೆ ದೃಷ್ಟಿಯಿಂದ ಲಸಿಕೆ ತೆಗೆದುಕೊಂಡರೆ ಉತ್ತಮ ಎಂಬುದು ತಜ್ಞರ ಅಭಿಪ್ರಾಯ.
ಇಸ್ಲಾಂಗೆ ವಿರೋಧವಿಲ್ಲ: ಕರೊನಾ ಲಸಿಕೆಗಳಲ್ಲಿ ಹಂದಿಯ ಕೊಬ್ಬಿನಂಶ ಇದ್ದರೂ ಇಂಥ ಲಸಿಕೆಯನ್ನು ಮಾನವ ಜೀವ ಉಳಿಸಲು ಬಳಸಬಹುದು ಎಂದು ಜಮಾತ್-ಎ-ಇಸ್ಲಾಮಿ ಹಿಂದ್ ಸ್ಪಷ್ಟಪಡಿಸಿದೆ. ಯುಎಇ ಅತ್ಯುನ್ನತ ಧಾರ್ವಿುಕ ಮಂಡಳಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ವಿಜ್ಞಾನಿಗಳು ಮತ್ತು ಕರೊನಾ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆಗಳು. ತುರ್ತು ಬಳಕೆಗೆ ಅನುಮತಿ ಸಿಕ್ಕಿರುವ ಎರಡೂ ಲಸಿಕೆಗಳು ಭಾರತದಲ್ಲೇ ತಯಾರಾಗಿರುವುದು ಹೆಮ್ಮೆಯ ವಿಚಾರ. ಕರೊನಾ ನಿಯಂತ್ರಣ ವಿಚಾರದಲ್ಲಿ ಇದು ಮಹತ್ವದ ತಿರುವು. ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವತ್ತ ವೈಜ್ಞಾನಿಕ ಸಮುದಾಯ ಮುಂದಡಿಯಿಟ್ಟಿದೆ.
| ನರೇಂದ್ರ ಮೋದಿ ಪ್ರಧಾನಿ
ಎರಡೂ ಲಸಿಕೆಗಳ ಅನುಮೋದ ನೆಗೆ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸುವೆ. ರಾಜ್ಯದಲ್ಲಿ ಲಸಿಕೆ ಲಭ್ಯವಾದ ಕೂಡಲೇ ವಿತರಣೆಗೆ ಸರ್ವಸನ್ನದ್ದರಾಗಿದ್ದೇವೆ.
| ಡಾ.ಕೆ.ಸುಧಾಕರ್ ಆರೋಗ್ಯ ಸಚಿವ