

| ಕೀರ್ತಿನಾರಾಯಣ ಸಿ. ಬೆಂಗಳೂರು
ಔಷಧ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಕೆಮ್ಮಿನ ಸಿರಪ್, ಸೈಕೋಟ್ರೋಪಿಕ್ (ಮಾನಸಿಕ ಖಿನ್ನತೆ) ಔಷಧಗಳ ಮಾರಾಟ ಹಾಗೂ ಸ್ಟೇಷನರಿ ಅಂಗಡಿಗಳಲ್ಲಿ ಅಪ್ರಾಪ್ತರಿಗೆ ಲಿಕ್ವಿಡ್ ಎರೇಸರ್ಗಳ ಮಾರಾಟಕ್ಕೆ ಇನ್ನುಮುಂದೆ ಕಡಿವಾಣ ಬೀಳಲಿದೆ. ಇವನ್ನು ಅಕ್ರಮವಾಗಿ ಮಾರಾಟ ಮಾಡುವ ಮೆಡಿಕಲ್ ಶಾಪ್ಗಳ ವಿರುದ್ಧ ಡ್ರಗ್ಸ್ ಕಂಟ್ರೋಲರ್ ಮೂಲಕ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕರ್ತವ್ಯಗಳಿಂದಾಗಿ ಡ್ರಗ್ಸ್ ಸಮಸ್ಯೆಗಳ ಬಗ್ಗೆ ಪೊಲೀಸರು ಹೆಚ್ಚಿನ ಗಮನಹರಿಸದಿರುವುದು ಕಂಡುಬಂದಿದೆ. ಮಾದಕ ದ್ರವ್ಯಗಳ ಅಕ್ರಮ ಸಾಗಣೆ ತಡೆಗಟ್ಟುವಿಕೆ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ 1988 (ಪಿಐಟಿ-ಎನ್ಡಿಪಿಎಸ್) ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ 2000 (ಕೋಕಾ) ಕಾಯ್ದೆಯಡಿ ಪ್ರಕರಣ ದಾಖಲಿಸುವ ಮುಖೇನ ಅಕ್ರಮ ಮಾರಾಟ ನಿಯಂತ್ರಣಕ್ಕೆ ಸೂಚಿಸಲಾಗಿದೆ.
ವೈದ್ಯಕೀಯ ಬಳಕೆಯ ಉದ್ದೇಶದಿಂದ ಸೈಕೋಟ್ರೋಪಿಕ್ ಔಷಧಗಳನ್ನು ತಯಾರಿಸಲಾಗುತ್ತದೆ. ಆದರೆ, ಮಾರಾಟ ಪ್ರಕ್ರಿಯೆಯಲ್ಲಿ ಸಮರ್ಪಕ ಮೇಲ್ವಿಚಾರಣೆ ಇಲ್ಲದ ಕಾರಣಕ್ಕೆ ಔಷಧಗಳು ಅಕ್ರಮವಾಗಿ ಬಳಕೆಯಾಗುತ್ತಿರುವುದು ದೃಢಪಟ್ಟಿದೆ. ಹೀಗಾಗಿ ಡ್ರಗ್ಸ್ ಕಂಟ್ರೋಲರ್ ಸಹಾಯ ಪಡೆದು ಔಷಧ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ನಿಯಂತ್ರಣ ಹೇರುವ ಜವಾಬ್ದಾರಿಯನ್ನು ಆಯಾ ಘಟಕಗಳ ಪೊಲೀಸ್ ಅಧಿಕಾರಿಗಳಿಗೆ ನೀಡಿ ಅಲೋಕ್ ಮೋಹನ್ ಆದೇಶಿಸಿದ್ದಾರೆ.
ಏನೆಲ್ಲ ಔಷಧ ಮಾರಾಟ?: ಬಾಡಿ ಬಿಲ್ಡಿಂಗ್ಗಾಗಿ ಸ್ಟೆರಾಯ್್ಡ ಮಾನಸಿಕ ಖಿನ್ನತೆಗೆ ತೆಗೆದುಕೊಳ್ಳುವ ಮಾತ್ರೆಗಳು, ನೋವು ನಿವಾರಕ ಮಾತ್ರೆ/ಇಂಜೆಕ್ಷನ್ಗಳು, ನಿದ್ರೆಮಾತ್ರೆಗಳು ಹಾಗೂ ಸ್ಟೇಷನರಿ ಅಂಗಡಿಗಳಲ್ಲಿ ದ್ರವರೂಪದ ಪದಾರ್ಥಗಳ ಮಾರಾಟ.
ಕೆಲ ಔಷಧಗಳನ್ನುಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಡ್ರಗ್ಸ್ ಕಂಟ್ರೋಲರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಹಾಯ ಪಡೆದು ಅಕ್ರಮ ಮಾರಾಟದ ಮೆಡಿಕಲ್ ಶಾಪ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಟೇಷನರಿ ಅಂಗಡಿ ಮಾಲೀಕರಿಗೂ ಜಾಗೃತಿ ಮೂಡಿಸಲು ನಿರ್ದೇಶಿಸಲಾಗಿದೆ. | ಡಾ.ಅಲೋಕ್ ಮೋಹನ್, ಡಿಜಿ-ಐಜಿಪಿ ನೋವು ನಿವಾರಕ, ನಿದ್ದೆ ಮಾತ್ರೆಗಳು, ಸಿರಪ್ ಸೇವನೆ ವ್ಯಸನವಾಗುತ್ತದೆ. ಕೆಲ ಮಾತ್ರೆಗಳು ದೇಹದ ಮೇಲೆ ಬೀರುವ ಪರಿಣಾಮದ ಅರಿವಿಲ್ಲದೆ ಸೇವಿಸುತ್ತಾರೆ. ಒಂದು ತಿಂಗಳು ಸೇವಿಸಲು ಹೇಳಿದರೆ ಒಂದು ವರ್ಷ ಸೇವಿಸುತ್ತಾರೆ. ದುಷ್ಪರಿಣಾಮ ಬೀರಿದ ನಂತರ ವೈದ್ಯರ ಬಳಿ ಬರುತ್ತಾರೆ. ಆದ್ದರಿಂದ ವೈದ್ಯರ ಚೀಟಿ ಇಲ್ಲದೆ ಯಾವ ಔಷಧವನ್ನೂ ತೆಗೆದುಕೊಳ್ಳಬಾರದು. | ಡಾ.ಎ. ಜಗದೀಶ್, ಅಭಯ್ ಆಸ್ಪತ್ರೆ ಮನೋವೈದ್ಯ