ಕರೊನಾ ಬಗ್ಗೆ ಇಟಲಿ ವೈದ್ಯ ಆಡಿದ ಮಾತಿಗೆ ಭರ್ಜರಿ ವಿರೋಧ; ಸೀನ್​ ಕ್ರಿಯೇಟ್​ ಮಾಡ್ಬೇಡಿ ಎಂದ ಡಬ್ಲ್ಯೂಎಚ್​ಒ

Corona 2 june 20
Published on

ಜಿನಿವಾ: ಇಟಲಿಯಲ್ಲಿ ಕರೊನಾ ವೈರಸ್​ ತುಂಬ ದಿನ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದಿದ್ದ ದೇಶದ ಪ್ರಮುಖ ವೈದ್ಯನ ಮಾತಿಗೆ ವಿಶ್ವ ಆರೋಗ್ಯ ಸಂಸ್ಥೆ, ಪ್ರಮುಖ ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕರೊನಾದ ತೀವ್ರ ಹೊಡೆತಕ್ಕೆ ಒಳಗಾಗಿರುವ ದೇಶದಲ್ಲಿ ಇಟಲಿ ಕೂಡ ಒಂದು. ಮಾರಣಾಂತಿಕ ವೈರಸ್​ನಿಂದ ಪಾರಾಗಲು ಕಳೆದ ಮೂರು ತಿಂಗಳ ಹಿಂದೆ ದೇಶದಲ್ಲಿ ಹೇರಲಾಗಿದ್ದ ಲಾಕ್​ಡೌನ್​ನ್ನು ಇಟಲಿ ಸರ್ಕಾರ ಹಂತಹಂತವಾಗಿ ಸಡಿಲಗೊಳಿಸುತ್ತಿದೆ. ಇದೀಗ ಮತ್ತೊಂದು ಸುತ್ತಿನಲ್ಲಿ ಸಡಿಲ ಮಾಡಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಅಲ್ಲಿನ ಪ್ರಮುಖ ವೈದ್ಯ, ಮಿಲನ್​​ನ ಸ್ಯಾನ್​ ರಾಫೆಲ್​ ಆಸ್ಪತ್ರೆಯ ಮುಖ್ಯಸ್ಥ ಡಾ. ಆಲ್ಬರ್ಟೋ ಜಾಂಗ್ರಿಲ್ಲೋ ಅವರು, ಇಟಲಿಯಲ್ಲಿ ಕರೊನಾ ವೈರಸ್ ತುಂಬ ದಿನ ಜೀವಿಸುವುದಿಲ್ಲ. ಶೀಘ್ರದಲ್ಲೇ ನಾಶವಾಗಲಿದೆ ಎಂಬುದು ಪ್ರಯೋಗದಿಂದ ಸಾಬೀತಾಗಿದೆ ಎಂದು ಹೇಳಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಕಳೆದ 10 ದಿನಗಳಲ್ಲಿ ಪರೀಕ್ಷೆಗೆ ಒಳಪಡಿಸಿದ ಸ್ವಾಬ್​​ನಲ್ಲಿ ವೈರಲ್​ ಪ್ರಮಾಣ ತುಂಬ ಕಡಿಮೆ ಇದೆ. ಕಳೆದ ತಿಂಗಳು ಮತ್ತು ಎರಡು ತಿಂಗಳ ಹಿಂದೆ ಇದ್ದಷ್ಟು ಪ್ರಮಾಣದ ವೈರಸ್​ ಈಗ ಕಾಣಿಸುತ್ತಿಲ್ಲ. ಹಾಗಾಗಿ ದೇಶದ ಜನರನ್ನು ಯಾರೂ ಭಯ ಪಡಿಸಬಾರದು. ಇದು ಇಲ್ಲಿ ತುಂಬ ದಿನ ಉಳಿಯುವುದಿಲ್ಲ ಎಂದಿದ್ದರು. ಆದರೆ ಆಲ್ಬರ್ಟೋ ಜಾಂಗ್ರಿಲ್ಲೋ ಅವರ ಹೇಳಿಕೆಗೆ ಹಲವು ತಜ್ಞರು ಮತ್ತು ಡಬ್ಲ್ಯೂಎಚ್​ಒ ವಿರೋಧ ವ್ಯಕ್ತಪಡಿಸಿದೆ.

ಕರೊನಾ ವೈರಸ್​ ಏಕಾಏಕಿ ಕಡಿಮೆಯಾಗುವ ರೋಗಕಾರಕವಲ್ಲ. ಅದು ಈಗಲೂ ಮಾರಣಾಂತಿಕವಾಗಿಯೇ ಉಳಿದುಕೊಂಡಿದೆ ಎಂದು ಡಬ್ಲ್ಯೂಎಚ್‌ಒ ಎಮರ್ಜೆನ್ಸಿ ವಿಭಾಗದ ನಿರ್ದೇಶಕ ಮೈಕೆಲ್‌ ರಯಾನ್ ಹೇಳಿದ್ದಾರೆ.

ಇಟಲಿ ವೈದ್ಯರ ಹೇಳಿಕೆಯನ್ನು ಉಲ್ಲೇಖಿಸಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಕರೊನಾ ವೈರಸ್​ ಬಗ್ಗೆ ಹೆಚ್ಚಾಗಿಯೇ ಜಾಗರೂಕರಾಗಿರಬೇಕು. ಒಮ್ಮೆಲೆ ನಾಶವಾಗುವ, ಪ್ರಮಾಣವನ್ನು ತಗ್ಗಿಸಿಕೊಳ್ಳುವ ವೈರಸ್​ ಅಲ್ಲ ಇದು. ಏನೇನೋ ಕಲ್ಪಿಸಿಕೊಂಡು ಹೇಳಿ, ಸೀನ್​ ಕ್ರಿಯೇಟ್​ ಮಾಡಬಾರದು ಎಂದಿದ್ದಾರೆ.

ಅಷ್ಟೇ ಅಲ್ಲ, ಇಟಲಿಯ ರಾಷ್ಟ್ರೀಯ ಆರೋಗ್ಯ ಮಂಡಳಿಯ ಮುಖ್ಯಸ್ಥ ಫ್ರಾಂಕೊ ಲೊಕಾಟೆಲ್ಲಿ ಅವರೂ ಕೂಡ ಆಲ್ಬರ್ಟೋ ಜಾಂಗ್ರಿಲ್ಲೋ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದನ್ನು ನೋಡಿಯೂ ಹೀಗೆಲ್ಲ ಹೇಳಬಾರದು ಎಂದು ಹೇಳಿದ್ದಾರೆ.

ಇಟಲಿಯಲ್ಲಿ ಕರೊನಾಕ್ಕೆ 33,000 ಜನರು ಬಲಿಯಾಗಿದ್ದಾರೆ. ತೀವ್ರ ಮಾರಣಾಂತಿಕವಾಗಿ ಪರಿಣಮಿಸಿದ ಸೋಂಕಿನಿಂದ ಪಾರಾಗಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್​ ಕಡ್ಡಾಯವಾಗಿ ಧರಿಸಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ ಎಂದು ಇಟಲಿ ಸರ್ಕಾರ ಅಲ್ಲಿನ ಜನರಿಗೆ ಸಾರಿಸಾರಿ ಹೇಳುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net