ಚೀನಾದಲ್ಲಿ ಉದ್ಯೋಗಿಗಳಿಗೆ ಜೀವಂತ ಹುಳು ತಿನ್ನುವ ಶಿಕ್ಷೆ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

China 1
Published on

ಬೀಜಿಂಗ್​: ಮಹಾಮಾರಿ ಕರೊನಾ ವೈರಸ್​ನಿಂದ ಇಡೀ ಜಗತ್ತೇ ತತ್ತರಿಸಿದೆ. ಆರ್ಥಿಕ ಬಿಕ್ಕಟ್ಟಿನಿಂದ ಅನೇಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಆದರೆ, ಚೀನಾದ ಕಂಪನಿಯೊಂದು ಇದೆಲ್ಲವನ್ನೂ ಮರೆತು ತನ್ನ ಉದ್ಯೋಗಿಗಳಿಗೆ ಅಸಹ್ಯಕರವಾದ ಶಿಕ್ಷೆಯನ್ನು ನೀಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದೆ.

ಮಾರಾಟದ ಗುರಿಯನ್ನು (Sales Goals) ಸಾಧಿಸಲು ವಿಫಲವಾದ ಉದ್ಯೋಗಿಗಳಿಗೆ ಜೀವಂತ ಹುಳುಗಳನ್ನು ತಿನ್ನುವ ಶಿಕ್ಷೆಯನ್ನು ಕಂಪನಿಯೊಂದು ವಿಧಿಸಿದೆ. ಇಡೀ ಜಗತ್ತು ವೈರಸ್​ಗೆ ನಲುಗಿದ್ದರೂ ಚೀನಾ ಕಂಪನಿ ಮಾತ್ರ ಇನ್ನು ಬುದ್ಧಿ ಕಲಿತಂತೆ ಕಾಣುತ್ತಿಲ್ಲ.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಉದ್ಯೋಗಿಯೋರ್ವಳು ಬಾಯಿಗೆ ಜೀವಂತ ಹುಳುವನ್ನು ಹಾಕಿಕೊಂಡು ನೀರು ಕುಡಿದು ನುಂಗುತ್ತಿರುವ ದೃಶ್ಯವಿದೆ. ಇನ್ನೊರ್ವಳು ಮನಸ್ಸಿಲ್ಲದಿದ್ದರೂ ಹುಳುವನ್ನು ತಿನ್ನುತ್ತಿರುವ ದೃಶ್ಯ ವಾಕರಿಕೆ ಬರುವಂತಿದೆ.

ಕೇವಲ ಜೀವಂತ ಹುಳುಗಳನ್ನು ತಿನ್ನುವುದು ಮಾತ್ರವಲ್ಲ ಶೌಚಗೃಹ ತೊಳೆಯುವ ಶಿಕ್ಷಯನ್ನು ನಮಗೆ ನೀಡಲಾಯಿತು ಎಂದು ಸಂತ್ರಸ್ತರೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಂಪನಿಯ ಮ್ಯಾನೇಜರ್​, ಇದು ಹೊಸ ಶಿಸ್ತಿನ ನೀತಿಗಳಾಗಿದ್ದು, ಇದಕ್ಕೆ ಕಂಪನಿಯ ಎಲ್ಲ ಉದ್ಯೋಗಿಗಳ ಸಹಮತವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಿಡಿಯೋವನ್ನು ಕಳೆದ ಸೋಮವಾರ ನೈರುತ್ಯ ಚೀನಾದ ಗ್ಯುಜೌ ಪ್ರಾಂತ್ಯದಲ್ಲಿನ ಬಿಜಿ ಹೆಸರಿನ ಒಳಂಗಾಣ ವಿನ್ಯಾಸ ಕಂಪನಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಕಂಪನಿಯ ಸೇಲ್ಸ್​ ಟೀಮ್​ ಸದಸ್ಯರು ಶಿಕ್ಷೆ ನೀಡುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್​ ಮಾಡಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪವು ಸಹ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net