

ಫ್ಯಾನ್ಸ್ ಜತೆ ಹೇಗೆ ಸಂವಹನ ನಡೆಸುತ್ತೀರಾ ಎಂದು ನಟಿಯರನ್ನು ಕೇಳಿದರೆ ತಕ್ಷಣ ಇನ್ಸ್ಟಾಗ್ರಾಂ, ಫೇಸ್ಬುಕ್ ಲೈವ್ ಮೂಲಕ ಎನ್ನುತ್ತಾರೆ. ಆದರೆ, ನಟಿ ನಿಶ್ವಿಕಾ ನಾಯ್ಡು ಈ ವಿಷಯದಲ್ಲಿ ಕೊಂಚ ಭಿನ್ನ. ಅವರು ಆನ್ಲೈನ್ನಲ್ಲಿ ಫ್ಯಾನ್ಸ್ ಜತೆಗೆ ಮಾತಾಡೋಕಿಂತ ಲೂಡೋ ಆಡುತ್ತಾರಂತೆ. ಇದಕ್ಕಾಗಿಯೇ ಪ್ರತಿದಿನ ಅವರ ಅಭಿಮಾನಿಗಳು ಕಾಯುತ್ತಾರಂತೆ. ಹಾಗೆಂದು ಹೇಳಿಕೊಳ್ಳುವ ನಿಶ್ವಿಕಾ, ಸದ್ಯ ಮನೆಯಲ್ಲೇನು ಮಾಡುತ್ತಿದ್ದಾರೆ? ಲಾಕ್ಡೌನ್ನಲ್ಲಿ ಏನೆಲ್ಲಾ ಮಾಡಿದರು? ಅಂತ ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.
ಶ್ವೇತಾ ನಾಯ್ಕ್ ಬೆಂಗಳೂರು
ನಿಶ್ವಿಕಾಗೆ ಲೂಡೋ ಕ್ರೇಜ್ ಶುರುವಾಗಿದೆ. ಒಂದು ದಿನವೂ ಮಿಸ್ ಮಾಡದೆ ಆಡುವುದು ಅಭ್ಯಾಸವಾಗಿದೆಯಂತೆ. ಅವರು ಆಡುವುದು ಕುಟುಂಬದವರ ಜೊತೆ ಅಲ್ಲ. ಬದಲಾಗಿ ಫ್ಯಾನ್ಸ್ ಜೊತೆ, ಅದೂ ಆನ್ಲೈನ್ನಲ್ಲಿ. ಪ್ರತಿದಿನ ಇನ್ಸ್ಟಾಗ್ರಾಮ್ಲ್ಲಿ ಲೂಡೋ ಕೋಡ್ ಕಳುಹಿಸುವ ನಿಶ್ವಿಕಾ, ‘ಮೊದಲು ಯಾರು 3 ಮಂದಿ ಸೆಲೆಕ್ಟ್ ಆಗುತ್ತಾರೋ ಅವರೊಂದಿಗೆ ಆಡುತ್ತೇನೆ. ಒಂದು ದಿನ ಕೋಡ್ ಕಳುಹಿಸಿಲ್ಲ ಅಂದ್ರೆ ಫ್ಯಾನ್ಸ್ ಮೆಸೇಜ್ ಮಾಡೋಕೆ ಶುರು ಮಾಡ್ತಾರೆ. ಅಲ್ಲೇ ಸಣ್ಣ ಚಾಟಿಂಗ್ ಕೂಡಾ ನಡೆಯುತ್ತೆ’ ಎನ್ನುತ್ತಾರೆ.
ಬೆಳಗ್ಗೆ ಬೇಗ ಏಳೋದು ಅಭ್ಯಾಸವಾಯ್ತು: ‘ಮುಂಚೆ ನನಗೆ ಈ ಅಭ್ಯಾಸ ಇರಲಿಲ್ಲ. ಆದರೆ, ಈಗ ಬೇಗ ಏಳೋದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಅದರಂತೆ ಬೇಗ ಮಲಗುತ್ತೇನೆ. ನಾನು ಸಿಕ್ಕಾಪಟ್ಟೆ ಫುಡ್ಡಿ ಅಲ್ಲ. ಆದರೆ, ಬೇಗ ಮಲಗಿ ಬೇಗ ಏಳುವುದರಿಂದ ಮಿಡ್ನೈಟ್ ಕ್ರೇವಿಂಗ್ ಇರಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದು. ಶೂಟಿಂಗ್ ಇರಲಿ, ಇಲ್ಲದಿರಲಿ ನನ್ನ ವರ್ಕ್ಔಟ್ ಮಿಸ್ ಆಗೋದೇ ಇಲ್ಲ’ ಎನ್ನುವ ನಿಶ್ಚಿಕಾಗೆ ಅಡುಗೆ ಮಾಡುವುದೆಂದರೆ ಅಲರ್ಜಿ ಅಂತೆ. ಮನೆಯಲ್ಲಿ ಏನು ಮಾಡಿರುತ್ತಾರೋ ಅದನ್ನು ಹೋಗಿ ಟೇಸ್ಟ್ ಮಾಡುವುದಷ್ಟೇ ಇವರ ಕೆಲಸ.
ಕಥೆ ಓದುವುಕ್ಕಿಂತ ಕೇಳಿದ್ರೆ ಬೆಸ್ಟ್
‘ರಾಮಾರ್ಜುನ’ ಮತ್ತು ‘ಗಾಳಿಪಟ 2’ಚಿತ್ರಗಳಲ್ಲಿ ನಟಿಸಿರುವ ನಿಶ್ವಿಕಾ ಸದ್ಯಕ್ಕೆ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ‘ಶೂಟಿಂಗ್ ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದೂ ಅಲ್ಲಿ ಸಿಗೋ ಊಟವನ್ನು ಇನ್ನಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎನ್ನುವ ನಿಶ್ಚಿಕಾ ಈಗಾಗಲೇ ಒಂದಷ್ಟು ಕಥೆ ಕೇಳಿದ್ದಾರಂತೆ. ಆದರೆ, ಅವರ ಪ್ರಕಾರ ಸಿನಿಮಾ ಕಥೆಯನ್ನು ಮನೆಗೆ ಕಳುಹಿಸಿ ನಾವೇ ಓದುವುದಕ್ಕಿಂತ ನಿರ್ದೇಶಕರೇ ಬಂದು ಕಥೆ ಹೇಳಿದ್ರೆ ಬೆಸ್ಟ್. ಹಾಗಾಗಿಯೇ ಯಾರಿಗೂ ಮನೆಗೆ ಸ್ಕ್ರಿಪ್ಟ್ ಕಳುಹಿಸಬೇಡಿ ಎಂದಿದ್ದಾರೆ. ಲಾಕ್ಡೌನ್ ಮುಗಿದ ಮೇಲೆ ಎಲ್ಲ ಕಥೆಗಳನ್ನು ಕೇಳಿ ಇಷ್ಟವಾದ್ದದ್ದನ್ನು ಫೈನಲ್ ಮಾಡುವ ಯೋಚನೆಯಲ್ಲಿದ್ದಾರೆ.
ನನ್ನ ಬರ್ತ್ಡೇಗೆ ನನ್ನದೇ ಕೇಕ್
ಇತ್ತೀಚೆಗಷ್ಟೇ ನಿಶ್ವಿಕಾ ಹುಟ್ಟುಹಬ್ಬ ಇತ್ತು. ಈ ಹುಟ್ಟುಹಬ್ಬ ಅವರಿಗೆ ವಿಶೇಷವಂತೆ. ‘ನಾನು ಅಡುಗೆ ಮನೆ ಕಡೆ ಹೋಗೋದು ತೀರಾ ಕಡಿಮೆ. ಅಮ್ಮ ಮಾಡಿದ್ದನ್ನು ತಿನ್ನೋದಷ್ಟೇ ನನ್ನ ಕೆಲಸ. ಆದರೆ, ಲಾಕ್ಡೌನ್ ವೇಳೆ ನನ್ನ ಹುಟ್ಟುಹಬ್ಬ ಬಂದಿದ್ದರಿಂದ ನಾನೇ ಕೇಕ್ ಮಾಡಿದ್ದೆ. ಅಭಿಮಾನಿಗಳಿಗೆ ಮೊದಲೇ ಹೇಳಿದ್ದೆ. ಯಾರೂ ಮನೆಯ ಹತ್ತಿರ ಬರಬೇಡಿ, ಕೇಕ್ ಕಟ್ ಮಾಡಿ ಫೋಟೋ ಹಾಕ್ತೇನೆ ಎಂದು. ಮನೆಯಲ್ಲೇ ಕುಟುಂಬದವರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡೆ’ ಎನ್ನುತ್ತಾರೆ.