

ನ್ಯೂಯಾರ್ಕ್: ಕರೊನಾ ಸೋಂಕು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ, ನ್ಯೂಯಾರ್ಕ್ನ ಸೆಂಟ್ರಲ್ ಪಾರ್ಕ್ ನಲ್ಲಿ ಬೆಳಗ್ಗೆ ಜಾಗಿಂಗ್ ಹೋದವರು ಕೆಲ ಹೊತ್ತು ಸ್ಟನ್ ಆಗಿ ಹೋಗಿದ್ದರು. ಅದೂ ಒಂದು ಮರದ ಮೇಲಿದ್ದ ಫ್ಲೈಯರ್ ಜಾಹೀರಾತು ನೋಡಿ!
ಜಾಹೀರಾತಿನ ಕಥೆ ಇಷ್ಟು - ಇಲ್ಲೊಬ್ಬ ಕೀಟಾಣು ರಹಿತ, ಆರೋಗ್ಯವಂತ, ಫಿಟ್ ಆ್ಯಂಡ್ ಕ್ಲೀನ್ ಆಗಿರುವ ಗರ್ಲ್ ಫ್ರೆಂಡ್ ಬೇಕಾಗಿದ್ದಾಳೆ ಅಂತ ಜಾಹೀರಾತು ಫ್ಲೈಯರ್ ಅನ್ನು ಸೆಂಟ್ರಲ್ ಪಾರ್ಕ್ ಸೇರಿ ವಿವಿಧೆಡೆ ಮರಗಳ ಮೇಲೆ ಪಿನ್ ಮಾಡಿದ್ದ.
"seeking GirlFriend for CoronaVirus'' ಎಂಬ ದಪ್ಪ ಅಕ್ಷರದ ಹೆಡ್ಡಿಂಗ್ ಎಂಥವರ ಗಮನವನ್ನೂ ಸೆಳೆದೀತು. ಅದರ ಕೆಳಗೆಯೇ ಆತನ ಹೆಸರು. ಒಂದು ಫೋಟೊ. ಅದಾಗಿ ನಂತರದ ಸಾಲಿನಲ್ಲಿ ಆರೋಗ್ಯವಂತ ಆಕರ್ಷಕ ಮತ್ತು ಉತ್ತಮ ಉದ್ಯೋಗದಲ್ಲಿರುವ 30 ವರ್ಷದೊಳಗಿನ ಪುರುಷನಿಗೆ ಕೀಟಾಣು ಮುಕ್ತ ಗರ್ಲ್ಫ್ರೆಂಡ್ ಬೇಕು.
ಈ ಒಕ್ಕಣೆಯ ನಂತರದ ಸಾಲಿನಲ್ಲೊಂದು ಮನವಿಯೂ ಇದೆ- ಪ್ಲೀಸ್ ಹೆಲ್ದಿ, ಫಿಟ್ ಮತ್ತು ಕ್ಲೀನ್ ಆಗಿ ಇರಿ. ಸಂಪರ್ಕಕ್ಕೆ ಒಂದು ಇಮೇಲ್ ಐಡಿಯೂ ಇದೆ.
ಈ ಜಾಹೀರಾತಿನ ಬೆನ್ನು ಹತ್ತಿದ ನ್ಯೂಯಾರ್ಕ್ ಪೋಸ್ಟ್, ಈ ಫ್ಲೈಯರ್ ಪ್ರಕಟಿಸಿದ ಯುವಕ ಬ್ರಾಡ್ನನ್ನು ಪತ್ತೆ ಹಚ್ಚಿತು. ಅಲ್ಲದೆ, ಜಾಹೀರಾತಿನ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು. ಅದಕ್ಕೆ ಆತ ಹೇಳಿದ್ದು ಇಷ್ಟು - ಲಾಕ್ಡೌನ್ ಕಾರಣಕ್ಕೆ ನಾನು ಇಲ್ಲಿ ಒಂಟಿಯಾಗಿದ್ದೇನೆ. ಪುನಃ ಡೇಟಿಂಗ್ ಯಾವಾಗ ಮತ್ತು ಹೇಗೆ ಮಾಡಬಹುದು ಎಂಬುದರ ಬಗ್ಗೆಯೇ ಚಿಂತಿತನಾಗಿದ್ದೆ. ಸೋಷಿಯಲ್ ಡಿಸ್ಟೆನ್ಸಿಂಗ್ ಕಾರಣದಿಂದಾಗಿ ಹೊಸಬರನ್ನು ಭೇಟಿ ಮಾಡುವುದು ಕೂಡ ತ್ರಾಸದ ವಿಷಯವೇ ಆಗಿಬಿಟ್ಟಿದೆ. ನಾವೆಲ್ಲರೂ ಈಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಇರುತ್ತೇವೆ. ಯಾರನ್ನೂ ಭೇಟಿ ಮಾಡಲಾಗದು. ಸಾಮಾನ್ಯ ಡೇಟಿಂಗ್ ಸಾಧ್ಯವೇ ಇಲ್ಲ. ಇನ್ನು ಆ್ಯಪ್ ಅಥವಾ ಡೇಟಿಂಗ್ ಸೈಟ್ಗಳಿಗೆ ಹೋದರೆ ಅಲ್ಲಿ ಸರಿಯಾದವರು ಸಿಗಲಾರರು. ಫೇಕ್ ಖಾತೆಗಳೇ ಹೆಚ್ಚು. ಈ ರೀತಿಯಾದರೆ ಸ್ಪರ್ಧೆ ಇರುವುದಿಲ್ಲ. ನಕಲಿಗಳ ಹಾವಳಿಯೂ ಇರುವುದಿಲ್ಲ. ಹೀಗಾಗಿ ದೀರ್ಘಾವಧಿಯ ಮತ್ತು ಎಕ್ಸ್ಕ್ಲೂಸಿವ್ ಆಗಿರುವ ಸಂಬಂಧ ಹೊಂದುವ ಸಲುವಾಗಿ ಈ ಫ್ಲೈಯರ್ ಜಾಹೀರಾತು ಪ್ರಕಟಿಸಿದೆ.
ಇ ಮೇಲ್ ಐಡಿಯೂ ಕೊಟ್ಟ ಕಾರಣ ಈಗಾಗಲೇ ಅನೇಕರು ನನ್ನನ್ನು ಸಂಪರ್ಕಿಸಿದ್ದಾರೆ. ಸಂಪರ್ಕಿಸುತ್ತಿದ್ದಾರೆ. ಅವರಲ್ಲಿ ನನ್ನ ಜೊತೆಗಾರ್ತಿಯನ್ನು ನಾನೇ ಆಯ್ಕೆ ಮಾಡಿಕೊಳ್ಳುವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)