ದೆಹಲಿ ಸರ್ಕಾರಿ ಕಚೇರಿಗಳನ್ನು ಮುಚ್ಚಲು ಸರ್ಕಾರ ನಿರ್ಧಾರ: ಲೆಫ್ಟಿನೆಂಟ್​ ಗವರ್ನರ್​ ಆದೇಶ ಕಾಯುತ್ತಿರುವ ಅಧಿಕಾರಿಗಳು

Arvind Kejriwal
Published on

ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕರೊನಾ ವೈರಸ್​ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾ.31ರವರೆಗೆ ಸರ್ಕಾರಿ ಕಚೇರಿಗಳನ್ನು ಮುಚ್ಚುವ ನಿರ್ಧಾರವನ್ನು ದೆಹಲಿ ಸರ್ಕಾರ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಸರ್ಕಾರಿ ಕಚೇರಿಗಳನ್ನು ಮುಚ್ಚುವ ವಿಚಾರವಾಗಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಾಲ್​ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

ದೆಹಲಿಯಲ್ಲಿ 13 ಮಂದಿಗೆ ಕರೊನಾ ವೈರಸ್​ ಸೋಂಕು ತಗುಲಿದೆ. 2ನೇ ಹಂತದಲ್ಲಿರುವ ಸೋಂಕು ಹರಡುವಿಕೆ 3ನೇ ಹಾಗೂ 4ನೇ ಹಂತಕ್ಕೆ ತಲುಪದಂತೆ ಮಾಡಲು ಸರ್ಕಾರಿ ಕಚೇರಿಗಳನ್ನು ಮುಚ್ಚುವುದು ಅಗತ್ಯ ಎಂದು ಸರ್ಕಾರ ನಿರ್ಧರಿಸಿದೆ.

ಮಾರ್ಚ್​ 31ರವರೆಗೆ ಅಗತ್ಯ ಸೇವೆ ಒದಗಿಸುವ ಆರೋಗ್ಯ, ಆಹಾರ ಮತ್ತು ನಾಗರಿಕಾ ಪೂರೈಕೆ ಇಲಾಖೆ, ಜಲಮಂಡಳಿ, ವಿದ್ಯುತ್​, ಅಗ್ನಿಶಾಮಕ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳನ್ನು ಮುಚ್ಚುವ ಪ್ರಸ್ತಾವನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್​ ಮಾಡುವ ನಿರ್ಧಾರದ ಬಗ್ಗೆ ದೆಹಲಿ ಲೆಫ್ಟಿನೆಂಟ್​ ಗವರ್ನರ್​ ಅವರ ಆದೇಶವನ್ನು ಕಾಯಲಾಗುತ್ತಿದೆ. ಅವರು ಆದೇಶ ನೀಡಿದ ಕೂಡಲೇ ಕಚೇರಿಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net