ನನ್ನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ... ಎನ್ನುತ್ತಾ ಕಣ್ಣೀರು ಹಾಕಿದ ಗೋವಿಂದ ಕಾರಜೋಳ

govinda karajola
Published on

ಬೆಂಗಳೂರು: ನನ್ನ ಇಡೀ ಕುಟುಂಬಕ್ಕೆ ಕರೊನಾದಿಂದ ತೊಂದರೆಯಾಗಿದೆ. ನಾನೂ ಕೂಡ ಕರೊನಾ ಸಂಕಷ್ಟಕ್ಕೆ ಸಿಲುಕಿದ್ದೆ. ಈಗ ಚೇತರಿಸಿಕೊಂಡಿದ್ದೇನೆ. ನನಗೆ 70 ವರ್ಷ ವಯಸ್ಸು. ನನ್ನ ಇಡೀ ಜೀವಮಾನದಲ್ಲಿ ಹೇಗೆ ಕೆಲಸ ಮಾಡಿದ್ದೇನೆ ಎನ್ನುವುದನ್ನು ಮಾಧ್ಯಮಗಳೂ ಗಮನಿಸಿವೆ ಎಂದು ಭಾವುಕರಾಗಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ ಕಣ್ಣೀರು ಹಾಕಿದರು.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಕಾರಜೋಳ, ಕಲಬುರಗಿಯಲ್ಲಿ ಭಾರಿ ಮಳೆಯಿಂದಗಿ ಅನಾಹುತಗಳು ಸಂಭವಿಸಿವೆ. ನಾನು ಮತ್ತು ನನ್ನ ಕುಟುಂಬ ಕರೊನಾ ಸಂಕಷ್ಟಕ್ಕೆ ಸಿಲುಕಿದೆ. ಕಲಬುರಗಿ ಜನರ ಕಷ್ವನ್ನು ಖುದ್ದು ಆಲಿಸಬೇಕಿದ್ದ ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. 600 ಕಿ.ಮೀ. ಪ್ರಯಾಣಿಸಲು ಆಗುತ್ತಿಲ್ಲ... ಎಂದು ಕಣ್ಣೀರು ಹಾಕಿದರು.

ಶಿರಾ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದೆ. ಶಿರಾ ಬಿಜೆಪಿ ಅಭ್ಯರ್ಥಿ ಹೊಸಬರು. ಅವರ ಭವಿಷ್ಯದ ದೃಷ್ಟಿಯಿಂದ ಒಂದು ಸಲ ಮುಖ ತೋರಿಸಿ ಹೋಗಿ ಎಂದು ಹೇಳಿದ್ದರು. ಹಾಗಾಗಿ ನಾನು ಅನಿವಾರ್ಯವಾಗಿ ಶಿರಾಗೆ ಹೋಗಿ ಬಂದೆ ಎಂದು ಸಮರ್ಥಿಸಿಕೊಂಡ ಕಾರಜೋಳ, ಸಿಎಂ ಸೂಚನೆಯಂತೆ ಕಂದಾಯ ಸಚಿವ ಆರ್. ಅಶೋಕ್ ಕಲಬುರಗಿ ಮತ್ತು ಯಾದಗಿರಿಗೆ ಹೋಗಿ ಪರಿಶೀಲಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಾಣ ಹಾನಿ ಆಗಿಲ್ಲ. ಕೇಂದ್ರದಿಂದ ಹೆಲಿಕಾಪ್ಟರ್​, ಬೋಟ್​ ಎಲ್ಲ ಬಂದಿವೆ. ಸರ್ಕಾರ ಕಲಬುರಗಿ ಜನರ ಜತೆಗಿದೆ. ಕಲಬುರಗಿ ಡಿಸಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.

ಬೇಸಿಗೆಯಲ್ಲಿ ತಂಪಿರಲಿ ಎಂಬ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ಜನ ಕಲ್ಲು, ಮಣ್ಣಿನಿಂದ ಮನೆ ಕಟ್ಟಿ ಕೊಂಡಿರುತ್ತಾರೆ. ಈ ಮನೆಗಳೀಗ ಮಳೆಯಿಂದಾಗಿ ಬೀಳುತ್ತಿವೆ. ಅಂತಹ ಮನೆಗಳನ್ನು ಸರ್ವೇ ಮಾಡಿ ಪುನರ್​ ನಿರ್ಮಾಣ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net