ಮತ್ತೆ ಶುರುವಾಯಿತಾ ಕರೊನಾತಂಕ?: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ, 402 ಮಂದಿಯಲ್ಲಿ ಸೋಂಕು

corona
Published on

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದ್ದು, ಶುಕ್ರವಾರ 402 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ. 0.60ಕ್ಕೆ ಏರಿಕೆಯಾಗಿದೆ.

ಕಳೆದ 4-5 ದಿನಗಳಿಂದ ಬೆಂಗಳೂರು ನಗರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದ್ದು, 224 ಪ್ರಕರಣಗಳು ವರದಿಯಾಗಿವೆ. ಧಾರವಾಡದಲ್ಲಿ 85, ಮೈಸೂರಿನಲ್ಲಿ 25, ದಕ್ಷಿಣ ಕನ್ನಡದಲ್ಲಿ 19 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ 16 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಒಂದಂಕಿಯಲ್ಲಿದ್ದು, 10 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

ಕೋವಿಡ್ ಸೋಂಕಿತರಲ್ಲಿ ಬೆಂಗಳೂರು ನಗರ, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಒಬ್ಬರಂತೆ ಆರು ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮರಣ ಪ್ರಮಾಣ ದರ ಶೇ. 1.49 ತಲುಪಿದೆ. ಈವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ 38,193ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 277 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.50 ಲಕ್ಷ ದಾಟಿದೆ. ಸದ್ಯ ರಾಜ್ಯದಲ್ಲಿ 6,611 ಸಕ್ರಿಯ ಪ್ರಕರಣಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net