

ನವದೆಹಲಿ: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಕಳೆದ ನಾಲ್ಕು ದಶಕಗಳಲ್ಲಿ 8 ಬಾರಿ ಅಪಘಾತಕ್ಕೀಡಾಗಿದೆ.
1977ರಲ್ಲಿ ತಮಿಳುನಾಡಿನ ಚೆನ್ನೈ ಸೆಂಟ್ರಲ್ನಿಂದ ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಚಾರ ಆರಂಭಿಸಿದ ಕೋಡಮಂಡಲ್ ಎಕ್ಸ್ಪ್ರೆಸ್ ರೈಲು ಕಳೆದ 46 ವರ್ಷಗಳಲ್ಲಿ ಹಲವು ಬಾರಿ ಅಪಘಾತಕ್ಕೀಡಾಗಿದೆ.
1997ರ ಆಗಷ್ಟ್ 15ರಂದು ಆಂಧ್ರಪ್ರದೇಶದ ವಿಶಾಖಪಟ್ಟಣ ಹಾಗೂ ಬ್ರಹ್ಮಪುರ ನಡುವೆ ಸಂಚರಿಸುವ ವೇಳೆ ರೈಲುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 75ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದರು.
1999ರ ಆಗಷ್ಟ್ 15ರಂದು ದಕ್ಷಿಣ ಒಡಿಶಾ ಹಾಗೂ ಉತ್ತರ ಆಂಧ್ರಪ್ರದೇಶದ ಪ್ರಮುಖ ನದಿಯಾದ ನಾಗಾವಳಿ ನದಿ ದಾಟುವ ವೇಳೆ ಸಂಭವಿಸಿದ ಅಪಘಾತದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದರು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
2002ರ ಮಾರ್ಚ್ 15ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೋವುರು ಮಂಡಲ ಮೇಲ್ಸೇತುವೆ ದಾಟುವ ಸಮಯದಲ್ಲಿ 7 ಬೋಗಿಗಳು ಹಳ್ಳಿ ತಪ್ಪಿದ ಪರಿಣಾಮ ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು.
2009ರ ಫೆಬ್ರವರಿ 13ರಂದು ಓಡಿಶಾದಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಜಾಜ್ಪುರ್ ಕಿಯೋಂಜಾರ್ ಪ್ರದೇಶದ ಬಳಿ ರೈಲು ಹಳಿ ತಪ್ಪಿ 16 ಪ್ರಯಾಣಿಕರು ಮೃತಪಟ್ಟಿದ್ದರು ಹಲವರು ಗಾಯಗೊಂಡಿದ್ದರು.
2009ರಲ್ಲಿ ಜಾಜ್ಪುರ ಜಿಲ್ಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕೆಲ ಬೋಗಿಗಳು ಬೆಂಕಿಗೆ ಆಹುತಿಯಾಗಿದ್ದವು.
ಇದನ್ನೂ ಓದಿ: ಒಡಿಶಾ ರೈಲು ದುರಂತ; 300ಕ್ಕೇರಿದ ಮೃತರ ಸಂಖ್ಯೆ
2012ರ ಜನವರಿ 14ರಂದು ತಮಿಳುನಾಡಿನ ಲಿಂಗರಾಜ ರೈಲ್ವೆ ನಿಲ್ದಾಣದಲ್ಲಿ ಬಳಿ ರೈಲಿನ ಕೆಲ ಬೋಗಿಗಳು ಬೆಂಕಿಗೆ ಆಹುತಿಯಾಗಿದ್ದವು. ಅದೇ ವರ್ಷ ಡಿಸೇಂಬರ್ 30ರಂದು ರೈಲಿಗೆ ಅಡ್ಡ ಬಂದ ಆನೆಗಳಿಗೆ ಗುದ್ದಿದ ಪರಿಣಾಮ ಎರಡು ಮರಿಯಾನೆ ಸೇರಿದಂತೆ ಆರು ಆನೆಗಳು ಹಾಗೂ ಓರ್ವ ಸಿಬ್ಬಂದಿ ಮೃತಪಟ್ಟಿದ್ದರು.
2015ರ ಏಪ್ರಿಲ್ 18ರಂದು ತಮಿಳುನಾಡಿದ ನಿಡದವೋಲು ಜಂಕ್ಷನ್ ಬಳಿ ಎರಡು ಬೋಗಿಗಳಲ್ಲಿ ಬೆಂಕಿಗೆ ಆಹುತಿಯಾಗಿದ್ದರಿಂದ ಅಪಾರ ನಷ್ಟ ಉಂಟಾಗಿತ್ತು.
1977ರಲ್ಲಿ ತಮಿಳುನಾಡಿನ ಚೆನ್ನೈ ಸೆಂಟ್ರಲ್ನಿಂದ ಪಶ್ಚಿಮ ಬಂಗಾಳದ ಹೌರಾ ನಡುವೆ ಸಂಚಾರ ಆರಂಭಿಸಿದ ಕೋಡಮಂಡಲ್ ಎಕ್ಸ್ಪ್ರೆಸ್ ರೈಲು ವಾರದಲ್ಲಿ ಎರಡು ದಿನ ಕಾರ್ಯಾಚರಣೆ ನಡೆಸುತ್ತಿತ್ತು. 1,662 ಕಿಲೋಮೀಟರ್ ಕ್ರಮಿಸಲು ಈ ರೈಲು ಒಟ್ಟು 33 ಘಂಟೆ 20 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು ಎಂದು ತಿಳಿದು ಬಂದಿದೆ.