

ಮುಂಬೈ: ಎರಡು ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿರುವ ಖ್ಯಾತ ನಟಿಯೊಬ್ಬರ ಮನೆಯನ್ನು ಇಂದು ಜಾಲಾಡಿದ ಅಪರಾಧ ವಿಭಾಗದ ಪೊಲೀಸರು, ನಟಿಗೆ ಸಂಬಂಧಿಸಿದ ಲ್ಯಾಪ್ಟಾಪ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ವಶಕ್ಕೆ ಪಡೆದಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ್ದ ಹಿನ್ನೆಲೆಯಲ್ಲಿ ಮರಾಠಿ ನಟಿ ಕೇತಕಿ ಚಿತಾಲೆ ಅವರನ್ನು ಎರಡು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು.
ನವಿ ಮುಂಬೈನ ಕಲಂಬೊಲಿಯಲ್ಲಿರುವ ಕೇತಕಿಯ ನಿವಾಸಕ್ಕೆ ಆಕೆಯನ್ನು ಕರೆದೊಯ್ದ ಪೊಲೀಸರು, ಆಕೆಗೆ ಸಂಬಂಧಿಸಿದ ಲ್ಯಾಪ್ಟಾಪ್, ಕಂಪ್ಯೂಟರ್ ಹಾರ್ಡ್ ಡಿಸ್ಕ್ ಜತೆಗೆ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ನಟಿ ವಿರುದ್ಧ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ ಒಟ್ಟು ಆರು ಕೇಸುಗಳು ದಾಖಲಾಗಿದ್ದು, ಈಕೆ ಮೇ 18ರ ವರೆಗೂ ಪೊಲೀಸರ ಕಸ್ಟಡಿಯಲ್ಲಿ ಇರಲಿದ್ದಾರೆ.