Priyank Kharge ಆಪ್ತನಿಂದ ಜೀವ ಬೆದರಿಕೆ ಆರೋಪ; ಗುತ್ತಿಗೆದಾರ ಆತ್ಮಹತ್ಯೆ, ಸಚಿವರು ಹೇಳಿದ್ದಿಷ್ಟು

Priyank Kharge
Published on

ಬೀದರ್​: ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಆಪ್ತನ ವಿರುದ್ಧ ಗುತ್ತಿಗೆದಾರರೊಬ್ಬರು ತಮಗೆ ಕೊಲೆ ಬೆದರಿಕೆ ಹಾಕಿದ್ದಾರ ಎಂದು ಆರೋಪಿಸಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕಟ್ಟಿತೂಂಗಾವ್ ಗ್ರಾಮದ ಸಚಿನ್​ (26) ಎಂದು ಗುರುತಿಸಲಾಗಿದ್ದು, ಇವರ ಮೃತದೇಹವು ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ 7 ಪುಟಗಳ ಡೆತ್​ನೋಟ್​ ಪತ್ತೆಯಾಗಿದ್ದು, ಸಚಿವ ಪ್ರಿಯಾಂಕ್​ ಖರ್ಗೆ ಆಪ್ತ, ಮಾಜಿ ಕಾರ್ಪೊರೇಟರ್‌ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ.

Priyank Kharge

15ಲಕ್ಷಕ್ಕೂ ಅಧಿಕ ಹಣ ಪಡೆದು ಟೆಂಡರ್ ಕೊಡಿಸದೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ರವಿ ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ. ಕುಟುಂಬಸ್ಥರ ಆಕ್ರಂದಣ ಮುಗಿಲುಮುಟ್ಟಿದ್ದು, ಪತ್ರದಲ್ಲಿರುವ ವ್ಯಕ್ತಿಗಳನ್ನು ಕರೆಸುವಂತೆ ಮೃತನ ಕಡೆಯವರು ಪಟ್ಟು ಹಿಡಿದಿದ್ದಾರೆ. ಕುಟುಂಬಸ್ಥರ ವಿರೋಧದ ನಡುವೆಯೇ ಪೊಲೀಸರು ಮೃತದೇಹವನ್ನು ಬಿಮ್ಸ್​ಗೆ ಸ್ಥಳಾಂತರಿಸಿದ್ದಾರೆ.

ಇನ್ನೂ ತಮ್ಮ ಆಪ್ತನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ನನಗೂ ಈಗಷ್ಟೆ ವಿಚಾರ ಗೊತ್ತಾಯ್ತು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುತ್ತೇನೆ. ಮಾಧ್ಯಮಗಳಲ್ಲಿ ಬಂದಿದೆ ನಾನೇ ಆಗ್ರಹ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದವರೇ ಆಗಿರಲಿ, ನನ್ನ ಆಪ್ತನೇ ಆಗಿರಲಿ. ಅದು ನನ್ನ ಇಲಾಖೆಗೆ ಬರುತ್ತೆ. ತನಿಖೆ ಮಾಡಿಸುತ್ತೇನೆ. ಇಲಾಖಾ ತನಿಖೆ ಕೂಡ ಮಾಡಿಸುತ್ತೇನೆ. ನಾನು ಯಾವುದೇ ಮುಚ್ಚುಮರೆ ಮಾಡಲ್ಲ. ತನಿಖೆ ಮಾಡಿಸಲ್ಲ ಅಂತ ಹೇಳಲ್ಲ. ತನಿಖೆಯಿಂದ ಸತ್ಯಾಸತ್ಯತೆ ಹೊರಗೆ ಬರಲಿ. ಸಮಗ್ರ ತನಿಖೆಯಾಗಲಿ ಎಂದು ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net