ಅವರು ಅನಕ್ಷರಸ್ಥರು, ಕೈಗೆ ಲಾಲಿಪಾಪ್​ ಕೊಟ್ಟಿದ್ದಾರೆ; Champions Trophy ವಿಚಾರವಾಗಿ ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ

Champions Trophy
Published on

ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಈಗಾಗಲೇ ತಯಾರಿ ಆರಂಭಿಸಿರುವ ಪಿಸಿಬಿ ಹಾಗೂ ಐಸಿಸಿ ಟೂರ್ನಿಯಲ್ಲಿ ಯಾವುದೇ ಲೋಪದೋಷ ಬಾರದಂತೆ ನಡೆಸಲು ಸಜ್ಜಾಗಿದೆ. ಭಾರತ ತಂಡವು ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿಯನ್ನು ಆಡುತ್ತಿದ್ದು, ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

ಇನ್ನೂ ಟೂರ್ನಿಗೆ (Champions Trophy) ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ಹೈಬ್ರಿಡ್​ ಮಾದರಿಗೆ ಒಪ್ಪಿಗೆ ಸೂಚಿಸಿದ್ದು, ಬಿಸಿಸಿಐ ಮತ್ತೊಮ್ಮೆ ತನ್ನ ಮೇಲುಗೈ ಸಾಧಿಸಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅಲ್ಲಿನ ಕ್ರಿಕೆಟ್​ ಮಂಡಳಿ ಹಾಗೂ ಮಾಜಿ ಆಟಗಾರರು ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ, ಆ ನಿರೀಕ್ಷೆ ಎಲ್ಲವೂ ಉಲ್ಟಾ ಆಗಿದ್ದು, ಪಿಸಿಬಿ ಹೈಬ್ರಿಡ್​ ಮಾದರಿಗೆ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಭಾರತ ಮೂಲದ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಡ್ಯಾನಿಶ್​ ಕನೇರಿಯಾ (Danish Kaneria) ಮಾತನಾಡಿದ್ದು, ಪಿಸಬಿ ವಿರುದ್ಧ ಹೌಹಾರಿದ್ದಾರೆ.

Danish Kaneria

ಐಎಎನ್​ಸ್​​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಡ್ಯಾನಿಶ್​, ಅವರು ನಮ್ಮ ಕೈಗೆ ಲಾಲಿಪಾಪ್​ ಕೊಟ್ಟು ಗೆಲುವನ್ನು ಸಾಧಿಸಿದ್ದಾರೆ. 2028ರಲ್ಲಿ ನಡೆಯಲಿರುವ ಮಹಿಳೆಯರ ವಿಶ್ವಕಪ್​ ಆತಿಥ್ಯವನ್ನು ನಮಗೆ ನೀಡಿದ್ದಾರೆ. ಇಲ್ಲಿನ ಜನರು ಹಾಗೂ ಕ್ರಿಕೆಟ್​ ಮಂಡಳಿಯವರು ನಾವು ಹೋರಾಡಿ ಗೆದ್ದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇಲ್ಲಿನ ಜನರು ಅನಕ್ಷರಸ್ಥರು ಎಂದು ಯಾರಿಗೂ ತಿಳಿದಿಲ್ಲ. ಹೈಬ್ರಿಡ್​ ಮಾದರಿಗೆ ಸಂಬಂಧಿಸಿದಂತೆ ನಮಗೆ ಬೇರೆ ದಿಕ್ಕಿಲ್ಲದ ಕಾರಣ ಒಪ್ಪಿಕೊಂಡಿದ್ದೇವೆ.

ದೇಶವು ಪ್ರಸ್ತುತ ಅಸ್ಥಿರ ಪರಿಸ್ಥಿತಿ ಎದುರಿಸುತ್ತಿದ್ದು, ಪಾಕಿಸ್ತಾನಕ್ಕೆ ಬರುವ ಬೇರೆ ತಂಡಗಳ ಮೇಲೂ ಏನಾದರೂ ಆದಲ್ಲಿ ಸಂಪೂರ್ಣ ಟೂರ್ನಿ ಸ್ಥಳಾಂತರಗೊಳ್ಳುತ್ತದೆ. ಪ್ರತಿಯೊಬ್ಬರಿಗೂ ಕಾಳಜಿ ಇದ್ದು, ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸುತ್ತಿರುವುದು ಉತ್ತಮ ನಡೆಯಾಗಿದೆ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ಪೈನಲ್​ ತಲುಪಿದಲ್ಲಿ ಪಂದ್ಯವನ್ನು ದುಬೈನಲ್ಲಿ ಆಡಿಸಲಾಗುತ್ತದೆ. ದುಬೈನಲ್ಲಿ ಭಾರತದ ಜೊತೆ ಆಡಲು ತೊಂದರೆ ಇಲ್ಲ ಎಂದು ಹೇಳುವವರು ಅವರ ನೆಲದಲ್ಲಿ ಆಡಲು ಯಾಕೆ ನೀವು ಒಪ್ಪಿಗೆ ಸೂಚಿಸಿಲ್ಲ ಎಂದು ಭಾರತ ಮೂಲದ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಡ್ಯಾನಿಶ್​ ಕನೇರಿಯಾ ಪಿಸಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net