ಗುರಿ ಈಡೇರಿಸಿಕೊಳ್ಳಲು ನಿರಂತರ ಪ್ರಯತ್ನ ಅಗತ್ಯ

gan-6
Published on

ಕುಂದಾಪುರ: ಗುರಿಯನ್ನು ಈಡೇರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಶೀಲರಾಗಿ, ನಿಮ್ಮ ಯಶಸ್ಸಿನ ಮೂಲಕ ಎಲ್ಲ ತೊಂದರೆಗಳು ಮಾಯವಾಗುತ್ತವೆ. ವಿದ್ಯಾರ್ಥಿಗಳೆಲ್ಲರಿಗೂ ಸಮಾನ ಪ್ರತಿಭೆ ಇಲ್ಲದಿರಬಹುದು. ಆದರೆ ಸಮಾನ ಅವಕಾಶಗಳಿವೆ. ಕನಸು, ಪ್ರಯತ್ನ, ಸಾಧನೆ ಇವು ಮೂರನ್ನು ನಿರ್ಲಕ್ಷಿಸದೆ ತಮ್ಮ ಏಳ್ಗೆಗೆ ತಾವೇ ಶಿಲ್ಪಿಗಳಾಗಬೇಕೆಂದು ಕರ್ಣಾಟಕ ಬ್ಯಾಂಕ್ ಉಡುಪಿ ವಿಭಾಗೀಯ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ ಕೆ. ಹೇಳಿದರು.

ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಗಣಕಶಾಸ್ತ್ರದ ಪ್ರಯೋಗಾಲಯಕ್ಕೆ 4.10 ಲಕ್ಷ ರೂ. ಮೌಲ್ಯದ ಯುಪಿಎಸ್ ಹಸ್ತಾಂತರಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ನಾಗರಾಜ ಯು., ಸಾಂಸ್ಕೃತಿಕ ಸಂಚಾಲಕ ಡಾ.ಭಾಗೀರಥಿ ನಾಯ್ಕ, ಅರಣ್ಯ ಗುತ್ತಿಗೆದಾರ ಜೆ.ಪಿ.ಶೆಟ್ಟಿ ಕಟ್ಕೆರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಭಾಕರ ಖಾರ್ವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ. ಸ್ವಾಗತಿಸಿದರು. ಉಪನ್ಯಾಸಕಿ ಶರಾವತಿ ನಿರೂಪಿಸಿದರು. ವಿದ್ಯಾರ್ಥಿ ನಾಯಕ ನಿತಿನ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net