

ಮಂಗಳೂರು: ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಳಿ ದುರಸ್ತಿ ಕಾಮಗಾರಿ ಮಳೆಯ ನಡುವೆಯೂ ಮುಂದುವರಿದಿದ್ದು, ಮಳೆಯಿಂದ ಕಾಮಗಾರಿ ನಿಧಾನವಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ರೈಲ್ವೆ ವ್ಯಾಗನ್ಗಳಲ್ಲಿ ಬಂಡೆಕಲ್ಲು, ಮರಳುಚೀಲ ಇತ್ಯಾದಿಗಳನ್ನು ತಂದು ಅವುಗಳನ್ನು ಭೂಕುಸಿತವಾದ ಕಡೆ ಕೆಳಭಾಗದಿಂದಲೇ ಗ್ಯಾಬಿಯನ್ ಮೆಷ್ನೊಂದಿಗೆ ಜೋಡಿಸುವ ಕಾರ್ಯ ನಡೆದಿದೆ. ಇದುವರೆಗೆ ಅದೃಷ್ಟವಷಾತ್ ಬೇರೆಲ್ಲೂ ಭೂಕುಸಿತ ಸಂಭವಿಸದಿರುವ ಕಾರಣ ಇನ್ನು ನಾಲ್ಕೈದು ದಿನದಲ್ಲಿ ಈ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇದು ಪೂರ್ಣಗೊಂಡ ಬಳಿಕ ಸಂಚಾರದ ಸುರಕ್ಷತೆ ನೋಡಿಕೊಂಡು ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆ ಇದೆ.
ತಂದು ಹಾಕಿರುವ ಮಣ್ಣು , ಕಲ್ಲುಗಳು ಮಳೆ ನೀರಿಗೆ ಕೊಚ್ಚಿ ಹೋಗುತ್ತಿದೆ. ಕುಸಿದು ಹೋದ ಈ ಭಾಗವನ್ನು ಕೆಳಗಿನಿಂದಲೇ ಮರುನಿರ್ಮಿಸಲಾಗುತ್ತಿದೆ. ಸುಮಾರು 400 ಮಂದಿ ಸಿಬ್ಬಂದಿ ಸಮರೋಪಾದಿಯಲ್ಲಿ ರಾತ್ರಿ ಹಗಲು ಕೆಲಸ ಮಾಡುತ್ತಿದ್ದಾರೆ. ಕೆಲಸಗಾರರಿಗೆ ಬೇಕಾದ ಆಹಾರ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.