

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಅನ್ನಭಾಗ್ಯ ಯೋಜನೆ ಅನುಷ್ಠಾನದ ಕುರಿತು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡುವ ಮೂಲಕ ವಾಗ್ದಾಳಿ ನಡೆಸಿದೆ.
ಈ ಮೊದಲು ಕೇಂದ್ರ ಸರ್ಕಾರದ ಆಹಾರ ನಿಗಮವು(FCI) ಮೊದಲಿಗೆ ಅಕ್ಕಿ ಕೊಡುವುದಾಗಿ ಹೇಳಿ ಉಲ್ಟಾ ಹೊಡೆದಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದ ಬೆನ್ನಲ್ಲೇ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ.
ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಬಿಜೆಪಿ ನಾಯಕರು ಅದೆಷ್ಟೇ ಷಡ್ಯಂತ್ರ ನಡೆಸಿದರೂ ನಾವು ಅನ್ನಭಾಗ್ಯದ ಅಕ್ಕಿಯನ್ನು 10 ಕೆಜಿಗೆ ಏರಿಸುವುದು ನಿಶ್ಚಿತ. ಬಸವಣ್ಣನ ಅನುಭವ ಮಂಟಪದ ದಾಸೋಹಕ್ಕೂ ವಿರೋಧಿಗಳು ಇಂತಹದ್ದೇ ಅಡೆತಡೆಗಳನ್ನು ಸೃಷ್ಟಿಸಿದ್ದರು. ನಮ್ಮ ಅನ್ನಭಾಗ್ಯದ ದಾಸೋಹವನ್ನು ಬಿಜೆಪಿಗರ ಯಾವ ಕುತಂತ್ರವೂ ತಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ.
ಕಳೆದ ವರ್ಷ ಸರ್ಕಾರಿ ದಾಸ್ತಾನಿನಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯದ ಹಾಳಾಗಿ ಹೋಗಿದ್ದ ವರದಿಯಾಗಿತ್ತು. ಈಗಲೂ 7 ಲಕ್ಷ ಟನ್ ಅಕ್ಕಿಯನ್ನು ಗೋದಾಮಿನಲ್ಲಿಟ್ಟು ಕೊಳೆಸುತ್ತಿದೆ ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಹಣ ಕೊಟ್ಟರೂ ಅಕ್ಕಿ ಕೊಡಲೊಪ್ಪದ್ದು ಜನವಿರೋಧಿ ನಡೆಯಲ್ಲವೇ? ಬಡವರ ಅನ್ನ ಕಿತ್ತೂಕೊಳ್ಳಲು ಬಿಜೆಪಿ ನಾನಾ ಮಾರ್ಗ ಹುಡುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಸ್ಪಷ್ಟವಾಗಿ ಆಹಾರ ಹಕ್ಕು ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. 7 ಲಕ್ಷ ಟನ್ ಅಕ್ಕಿ ಸಂಗ್ರಹವಿದ್ದರೂ ರಾಜ್ಯಗಳಿಗೆ FCI ಅಕ್ಕಿ ಮಾರಾಟ ಮಾಡುವುದನ್ನು ನಿರಾಕರಿಸುವ ಮೂಲಕ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಮೋದಿ. ಖಾಸಗಿಯವರಿಗೆ ಮಾರಾಟ ಮಾಡುವ ಅವಕಾಶವಿರುವಾಗ ರಾಜ್ಯ ಸರ್ಕಾರಕ್ಕೆ ಏಕೆ ಈ ನಿರಾಕರಣೆ. ಇದು ದುರುದ್ದೇಶವಲ್ಲದೆ ಇನ್ನೇನು ಎಂದು ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದೆ.