12 ಕೋಟಿ ರೂ. ನಗದು, ವಿಐಪಿ ಸಂಖ್ಯೆಯ ಕಾರುಗಳು! 'ಕೈ' ಶಾಸಕನ ಮನೆಯಲ್ಲಿ ಇಡಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? | Veerendra Puppy

ವಿಜಯವಾಣಿ - 2025-08-23T163654.872
Published on

Veerendra Puppy: ಅಕ್ರಮವಾಗಿ ಬೆಟ್ಟಿಂಗ್ ಸಂಸ್ಥೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್​ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಇದೀಗ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆಯಷ್ಟೇ ಅವರ ಚಿತ್ರದುರ್ಗದ ನಿವಾಸದ ಮೇಲೆ ದಾಳಿ ನಡೆಸಿದ್ದ ತನಿಖಾ ಸಂಸ್ಥೆ, 12 ಕೋಟಿ ರೂ. ನಗದು, ದುಬಾರಿ ಬೆಲೆಯ ಕಾರುಗಳನ್ನು ವಶಕ್ಕೆ ಪಡೆದಿದೆ.

ಭಾರತದ ಹಲವೆಡೆ ಎರಡು ದಿನಗಳ ಶೋಧ ಕಾರ್ಯಾಚರಣೆ ನಡೆಸಿದ ಬಳಿಕವೇ ಇಡಿ ಅಧಿಕಾರಿಗಳು, ಸಿಕ್ಕಿಂನ ಗ್ಯಾಂಗ್ಟಕ್​ನಲ್ಲಿ ವೀರೇಂದ್ರರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ದುಬೈನ ಅಂತಾರಾಷ್ಟ್ರೀಯ ಕ್ಯಾಸಿನೊ ಮತ್ತು ಗೇಮಿಂಗ್ ಅಡ್ಡೆಗಳಲ್ಲಿ ಬೃಹತ್ ಅಕ್ರಮ ಬೆಟ್ಟಿಂಗ್ ಜಾಲವಿರುವುದು ದೃಢವಾಗಿದೆ.

ಆಗಸ್ಟ್ 22 ಮತ್ತು 23ರಂದು ಸಿಕ್ಕಿಂ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ. ತನಿಖಾ ಸಂಸ್ಥೆಯ ಅಧಿಕಾರಿಗಳು, ಗೋವಾದ ಐದು ಕ್ಯಾಸಿನೊಗಳ ಮೇಲೆ ಕಣ್ಣಿಟ್ಟಿದ್ದರು. ದಾಳಿಯಲ್ಲಿ, 1 ಕೋಟಿ ರೂ. ವಿದೇಶಿ ಕರೆನ್ಸಿ ಸೇರಿ 12 ಕೋಟಿ ರೂ. ನಗದು, 6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಸುಮಾರು 10 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಟ್ಟಿಗೆ ಒಂದೇ ವಿಐಪಿ ಸಂಖ್ಯೆ (0003) ಹೊಂದಿರುವ ಮೂರು ಐಷಾರಾಮಿ ಕಾರುಗಳು ಸಹ ಪತ್ತೆಯಾಗಿವೆ.

ಈ ಪ್ರಕರಣದ ಬೆನ್ನಲ್ಲೇ ಶುಕ್ರವಾರ (ಆ.22) ವೀರೇಂದ್ರರನ್ನು ಸಿಕ್ಕಿಂನ ಗ್ಯಾಂಗ್ಟಕ್​ನ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಹಾಜರುಪಡಿಸಲಾಯಿತು. ಅದಾದ ಬಳಿಕ ಬೆಂಗಳೂರಿನ ಕೋರ್ಟ್​ಗೆ ಹಾಜರುಪಡಿಸಲು ಟ್ರಾನ್ಸಿಟ್​ ರಿಮಾಂಡ್​ ಅನ್ನು ಪಡೆಯಲಾಯಿತು ಎಂದು ವರದಿ ಉಲ್ಲೇಖಿಸಿದೆ. ಪ್ರಸ್ತುತ, ಪ್ರಕರಣದ ತನಿಖೆಯನ್ನು ಬೆಂಗಳೂರಿನ ಇಡಿ ಅಧಿಕಾರಿಗಳು ನಡೆಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net