ಒಂದೇ ಒಂದು ವಾಟ್ಸ್​ಆ್ಯಪ್ ಸಂದೇಶ! ಸರ್ಕಾರಿ ನೌಕರನ 1,90,000 ರೂ. ಗುಳುಂ​ | Wedding Invite

ವಿಜಯವಾಣಿ - 2025-08-23T151311.407
Published on

Wedding Invite: ವಾಟ್ಸ್​ಆ್ಯಪ್​ನಲ್ಲಿ ಬಂದ ಮದುವೆ ಆಮಂತ್ರಣ ಪತ್ರಿಕೆಯ ಸಂದೇಶ ತೆರೆದ ಸರ್ಕಾರಿ ಉದ್ಯೋಗಿ, ಬರೋಬ್ಬರಿ 1,90,000 ರೂ. ಹಣವನ್ನು ಕಳ್ಳೆದುಕೊಂಡ ಘಟನೆ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ವರದಿಯಾಗಿದೆ.

ವಾಟ್ಸ್​ಆ್ಯಪ್​ನಲ್ಲಿ ಆಗಸ್ಟ್ 30ರಂದು ಮದುವೆಗೆ ಆಹ್ವಾನಿಸುವ ಡಿಜಿಟಲ್​ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿದ ಸರ್ಕಾರಿ ಉದ್ಯೋಗಿಯೊಬ್ಬ, ಅಪರಿಚಿತ ಸಂಖ್ಯೆಯಿಂದ ಬಂದ ವೆಡ್ಡಿಂಗ್ ಕಾರ್ಡ್​ ಅನ್ನು ಹಿಂದೆ-ಮುಂದೆ ಯೋಚಿಸದೆ ತೆರೆದ ಕೆಲವೇ ಕ್ಷಣಗಳಲ್ಲಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾನೆ.

ಮದುವೆ ಆಮಂತ್ರಣ ಪತ್ರಿಕೆಯ ಪಿಡಿಎಫ್​ ಫೈಲ್ ಅನ್ನು ಕ್ಲಿಕ್ ಮಾಡಿದ ಕೂಡಲೇ, ಸೈಬರ್ ಅಪರಾಧಿಗಳು ವಾಟ್ಸ್​ಆ್ಯಪ್ ಬಳಕೆದಾರನ ಡೇಟಾವನ್ನು ಪ್ರವೇಶಿಸಿ, ಆತನ ಬ್ಯಾಂಕ್​ ಖಾತೆಯಲ್ಲಿದ್ದ 1,90,000 ರೂ. ಹಣವನ್ನು ಕ್ಷಣಮಾತ್ರದಲ್ಲಿ ಲಪಟಾಯಿಸಿದ್ದಾರೆ. ಈ ಪ್ರಕರಣ ಹಿಂಗೋಲಿ ಪೊಲೀಸ್ ಠಾಣೆಯ ಸೈಬರ್ ಸೆಲ್ ಇಲಾಖೆಯಲ್ಲಿ ದಾಖಲಾಗಿದ್ದು, ಇದೊಂದು ಆನ್​ಲೈನ್​ ವಂಚಕರ ಜಾಲ ಎಂಬುದು ದೃಢವಾಗಿದೆ.

ನಿಮಗೂ ಬರಬಹುದು ಎಚ್ಚರ!

ಮದುವೆ ಆಹ್ವಾನ ಸೇರಿದಂತೆ ಡಿಜಿಟಲ್ ಕಾರ್ಡ್​ಗಳನ್ನು ಕಳುಹಿಸುವ ಅಪರಿಚಿತರ ಸಂಖ್ಯೆಯ ಸಂದೇಶಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ. ಆದಷ್ಟು ಇಂತಹ ಸಂದೇಶಗಳನ್ನು ಡಿಲೀಟ್ ಮಾಡಿ, ಇಲ್ಲವೇ ಹತ್ತಿರದ ಸೈಬರ್​ ಪೊಲೀಸರಿಗೆ ದೂರು ನೀಡಿ. ಇಂತಹ ಸಂದೇಶಗಳನ್ನು ಒಮ್ಮೆ ಕ್ಲಿಕ್ ಮಾಡಿದ ನಂತರ, APK ಫೈಲ್‌ಗಳು ಫೋನ್‌ನಲ್ಲಿ ಡೌನ್‌ಲೋಡ್ ಆಗುತ್ತವೆ. ಬಳಿಕ ಸೈಬರ್ ಅಪರಾಧಿಗಳ ಕೈಚಳಕಕ್ಕೆ ದಾರಿ ಮಾಡಿಕೊಡುತ್ತವೆ. ಇದರಿಂದ ಕ್ರಿಮಿನಲ್​ಗಳು ತಾವು ಕುಳಿತ ಜಾಗದಿಂದಲೇ ನಿಮ್ಮ ಫೋನ್‌ನಲ್ಲಿ ಸಿಗುವ ವೈಯಕ್ತಿಕ ಡೇಟಾವನ್ನು ಬಳಸಿಕೊಂಡು, ಬ್ಯಾಂಕ್ ಖಾತೆಯಿಂದ ಹಣವನ್ನು ಬಾಚುತ್ತಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net