

K Y Nanjegowda: ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡಗೆ ಕರ್ನಾಟಕ ಹೈಕೋರ್ಟ್ ಶಾಕ್ ನೀಡಿದೆ. ಅವರ ಆಯ್ಕೆಯನ್ನು ಅಸಿಂಧು ಎಂದು ಹೇಳಿದ್ದು, 2023ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳನ್ನು ಮರುಎಣಿಕೆಗೆ ಮಂಗಳವಾರ (ಸೆ. 16) ಆದೇಶ ನೀಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕೆ.ವೈ.ನಂಜೇಗೌಡ ವಿರುದ್ದ ಪರಾಜಿತ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದರು.
ಸದರಿ ಪ್ರಕರಣವನ್ನು ಎರಡು ವರ್ಷಗಳ ವಿಚಾರಣೆ ಬಳಿಕ, ಇಂದು ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ಪೀಠ ಆದೇಶ ನೀಡಿದೆ. ಶಾಸಕ ನಂಜೇಗೌಡ ಅವರ ಆಯ್ಕೆಯನ್ನು ರದ್ದುಗೊಳಿಸಿ, ಮರು ಮತೆಣಿಕೆಗೆ ಆದೇಶ ನೀಡಿದೆ. ಆದ್ಯಾಗ್ಯೂ ಶಾಸಕ ನಂಜೇಗೌಡರ ವಕೀಲರ ಮನವಿಯ ಮೇರೆಗೆ, ಹೈಕೋರ್ಟ್ ತನ್ನದೇ ಆದ ಆದೇಶವನ್ನು 30 ದಿನಗಳವರೆಗೆ ತಡೆಹಿಡಿದಿದೆ.
ಶಾಸಕರಿಗೆ ಈ ಕುರಿತು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು 30 ದಿನಗಳವರೆಗೆ ಕಾಲವಕಾಶ ನೀಡಿದೆ. ಈ ಅವಧಿಯೊಳಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡದಿದ್ದರೇ ಕೆ.ವೈ.ನಂಜೇಗೌಡರ ಶಾಸಕ ಸ್ಥಾನ ರದ್ದಾಗುತ್ತದೆ ಎನ್ನಲಾಗಿದೆ.