

ED summons: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಜಾರಿ ನಿರ್ದೇಶನಾಲಯ (ED) ಇಂದು (ಸೆ. 16) ಮಾಜಿ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ ಮತ್ತು ಯುವರಾಜ್ ಸಿಂಗ್ ಹಾಗೂ ನಟ ಸೋನು ಸೂದ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
1xBet ಹೆಸರಿನ ಆ್ಯಪ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಮುಂದಿನ ವಾರದಿಂದ ದೆಹಲಿಯಲ್ಲಿರುವ ಇಡಿ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಸೆ. 22ರಂದು ರಾಬಿನ್ ಉತ್ತಪ್ಪ, ಸೆ. 23ರಂದು ಯುವರಾಜ್ ಸಿಂಗ್ ಹಾಗೂ ಸೆ. 24ರಂದು ಸೋನು ಸೂದ್ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಈ ತನಿಖೆಯ ಭಾಗವಾಗಿ ಇಡಿ ಕಳೆದ ಕೆಲವು ವಾರಗಳಲ್ಲಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್, ಟಿಎಂಸಿ ಮಾಜಿ ಸಂಸದೆ ಮತ್ತು ನಟಿ ಮಿಮಿ ಚಕ್ರವರ್ತಿ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಇಂದು ಬಂಗಾಳಿ ನಟ ಅಂಕುಶ್ ಹಜ್ರಾ ಸಹ ವಿಚಾರಣೆಗೆ ಹಾಜರಾಗಿದ್ದರು. ನಟಿ ಊರ್ವಶಿ ರೌಟೇಲಾಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಇನ್ನು ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.
1xBet ಮತ್ತು ಅದರ ಅವತಾರಗಳಾದ 1xBat ನಂತಹ ಪ್ಲಾಟ್‌ಫಾರ್ಮ್‌ಗಳು ಕೌಶಲ್ಯ ಆಧಾರಿತ ಆಟಗಳನ್ನು ಆಯೋಜಿಸುವುದಾಗಿ ಹೇಳಿಕೊಳ್ಳುತ್ತವೆ, ಆದರೆ ಅಸ್ತಿತ್ವದಲ್ಲಿರುವ ಭಾರತೀಯ ಕಾನೂನುಗಳ ಅಡಿಯಲ್ಲಿ ಅವುಗಳನ್ನು ಜೂಜಾಟದ ಉದ್ಯಮವನ್ನಾಗಿ ಮಾಡುವ ಕಠಿಣ ಅಲ್ಗಾರಿದಮ್‌ಗಳನ್ನು ಬಳಸುತ್ತವೆ ಎಂದು ED ಹೇಳಿಕೊಂಡಿದೆ.
ಬಳಕೆದಾರರು ಮತ್ತು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ಮೌಲ್ಯವನ್ನು ವಂಚಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ಕಟ್ಟೋದನ್ನು ತಪ್ಪಿಸಿದ ಆರೋಪದ ಮೇಲೆ 1xBet ಬೆಟ್ಟಿಂಗ್ ಆಪ್ ಮೇಲೆ ಇಡಿ ಪಿಎಂಎಲ್ಎ ಕಾಯ್ದೆಯಡಿ ತನಿಖೆ ನಡೆಸುತ್ತಿದೆ. ಈ ತನಿಖೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕ್ರೀಡಾಪಟುಗಳು, ಚಲನಚಿತ್ರ ನಟರು, ಆನ್‌ಲೈನ್ ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳನ್ನು ಏಜೆನ್ಸಿ ವಿಚಾರಣೆಗೆ ಒಳಪಡಿಸುವ ನಿರೀಕ್ಷೆಯಿದೆ ಎಂದು ಇಡಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)