

ಬಳ್ಳಾರಿ: ಕೇಸ್ ಹಿಂಪಡೆಯದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಆರೋಪಿಸಿ ಬಳ್ಳಾರಿ ಕಾಂಗ್ರೆಸ್ ನಾಯಕ ಹಾಗೂ ಅವರ ಮಗನ ವಿರುದ್ದ ಎಫ್ಐಆರ್ ದಾಖಲಾಗಿದೆ. ಬಳ್ಳಾರಿ ಕಾಂಗ್ರೆಸ್ ನಾಯಕ ಸೂರ್ಯ ನಾರಾಯಣ ರೆಡ್ಡಿ ಹಾಗೂ ಭರತ್ ರೆಡ್ಡಿ ವಿರುದ್ದ ಎಫ್ಐಆರ್ ದಾಖಲಾಗಿದೆ.
ಭರತ್ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಸುನಿಲ್ ಸಿ ಎನ್ನುವವರಿಂದ ಸೂರ್ಯನಾರಾಯಣ ರೆಡ್ಡಿ ಹಾಗೂ ಭರತ್ ರೆಡ್ಡಿ ಸೇರಿದಂತೆ 5 ಜನರ ವಿರುದ್ದ ದೂರು ಬಂದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸುನಿಲ್ ಕುಮಾರ್ ಹಾಗು ಅವರ ಸಂಬಂಧಿಗಳಿಂದ ಸೂರ್ಯ ನಾರಾಯಣ ರೆಡ್ಡಿ ವಿರುದ್ಧ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನಡೆಯುತ್ತಿದೆ.
ಆದರೆ ಆಸ್ತಿ ವಿಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಹಿಂಪಡೆಯುವಂತೆ ಸೂರ್ಯ ನಾರಾಯಣ ರೆಡ್ಡಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಕೇಸ್ ಹಿಂಪಡೆಯದಿದ್ದರೆ ಕೊಲೆ ಮಾಡೋದಾಗಿ ಭರತ್ ರೆಡ್ಡಿ ಆಪ್ತ ರತ್ನ ಬಾಬು ಹಾಗೂ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಬಗ್ಗೆ ಎಫ್ಐಆರ್ ದಾಖಲಾಗಿದೆ.
ರೆಡ್ಡಿ ಬೆಂಬಲಿಗರು, ಪೂರ್ಣಿಮಾ, ಕವಿತಾ ಸೇರಿದಂತೆ ಸುನಿಲ್ ಕುಮಾರ್ ವಕೀಲರಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಭರತ್ ರೆಡ್ಡಿ ಆಪ್ತರು ಹಾಗೂ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎಂದು ಸುನೀಲ್ ಕುಮಾರ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.