ಶಾಸಕಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಒತ್ತಾಯಿಸಿ ಕಾಂಗ್ರೆಸ್‌ ಪ್ರತಿಭಟನೆ

6KWR3
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಶಾಸಕಿ ರೂಪಾಲಿ ನಾಯ್ಕ ಅವರ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಶಾಸಕಿ ರೂಪಾಲಿ ನಾಯ್ಕ ಅವರನ್ನು ಗೂಂಡಾ ಎಂದು ಸಂಬೋಧಿಸಿದ ಕಾಂಗ್ರೆಸ್ ಕಾರ್ಯಕರ್ತರು ಅವರ ವಿರುದ್ಧ ವಿಧವಿಧದ ಘೋಷಣೆಗಳನ್ನು ಕೂಗಿದರು. ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಎಡಿಸಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, ಮಾಜಾಳಿ ಗ್ರಾಪಂ ಪಿಡಿಒ ವರ್ಗಾವಣೆ ವಿಚಾರವಾಗಿ ಚರ್ಚಿಸಲು ಅಲ್ಲಿನ ಗ್ರಾಪಂ ಸದಸ್ಯರ ಜತೆಗೆ ಮಾಜಿ ಶಾಸಕ ಸತೀಶ ಸೈಲ್ ಅವರು ಜಿಪಂ ಸಿಇಒ ಕೊಠಡಿಗೆ ಶುಕ್ರವಾರ ತೆರಳಿದ್ದರು. ಈ ಸಂದರ್ಭದಲ್ಲಿ ಆಗಮಿಸಿದ ಶಾಸಕಿ ರೂಪಾಲಿ ನಾಯ್ಕ ಅವರು, `ನೀನು ಕುಡುಕ, ಕುಡಿದು ಬಂದಿದ್ದೀಯ' ಎಂದು ಮಾಜಿ ಶಾಸಕರನ್ನು ಅಸಂವಿಧಾನಿಕ ಪದಗಳಿಂದ ನಿಂದಿಸಿದರು. ಮಾತ್ರವಲ್ಲ ನಂತರ ಅಲ್ಲಿದ್ದ ಪೇಪರ್ ವೇಟ್ ತೆಗೆದುಕೊಂಡು ಹೊಡೆಯಲು ಹೋದರು.
ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೆ, ಶಾಸಕಿ ರೂಪಾಲಿ ವಿರುದ್ಧ ಸತೀಶ ಸೈಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಲ್ಲ. ಆದರೆ, ರೂಪಾಲಿ ನಾಯ್ಕ ನೀಡಿದ ದೂರನ್ನು ಆಧರಿಸಿ ಸತೀಶ ಸೈಲ್ ಹಾಗೂ ಇತರರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಶೀಘ್ರದಲ್ಲಿ ಶಾಸಕಿಯ ಮೇಲೂ ದೂರು ದಾಖಲಿಸಬೇಕು ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು. ಕಾರವಾರ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು. ಒಬ್ಬ ಮಾಜಿ ಶಾಸಕರ ವಿರುದ್ಧವೇ ಈ ರೀತಿ ವರ್ತನೆ ಮಾಡುವ ಶಾಸಕಿ ರೂಪಾಲಿ ನಾಯ್ಕ ಇನ್ನು ಸಾಮಾನ್ಯ ಜನರನ್ನು ಹೇಗೆ ನಡೆಸಿಕೊಳ್ಳಬಹುದು ಎಂದು ಪ್ರಶ್ನಿಸಿದರು.
ಪುರುಷೋತ್ತಮ ಗೌಡ, ಜಿ.ಪಿ.ನಾಯ್ಕ, ರೋಹಿದಾಸ ವೈಂಗಣಕರ್, ಅಜಯ ಸಿಗ್ಲಿ, ರಾಜೇಂದ್ರ ರಾಣೆ, ರಾಜೇಂದ್ರ ಅಂಚೆಕರ್ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net