ಮಂಟಪದಲ್ಲಿ ಹುಚ್ಚಾಟ ಮಾಡಿ ಮದುವೆ ನಿಲ್ಲಿಸಿದ ಪ್ರೇಮಿಯ ಮೇಲೆ ಹಲ್ಲೆ!

Crime Symbolic
Published on

ದೇವನಹಳ್ಳಿ: ಪ್ರೇಮಿಯ ಮದುವೆ ವಿಚಾರ ತಿಳಿದು ಛತ್ರದ ಬಳಿ ಬಂದು ಗಲಾಟೆ ಮಾಡಿದ ಭಗ್ನ ಪ್ರೇಮಿಯನ್ನು ಯುವತಿಯ ಪೋಷಕರು ಕತ್ತು ಕೊಯ್ದ ಪ್ರಸಂಗ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಘಾಟಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಬಳಿ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ನಡೆಯಬೇಕಿದ್ದ ಯುವತಿಯ ಮದುವೆ ಮುರಿದು ಬಿದ್ದಿದೆ.

ಬೆಂಗಳೂರು ಮೂಲದ ಗೋವಿಂದ ಮತ್ತು ಮಂಗಳ ( ಹೆಸರುಗಳನ್ನು ಬದಲಿಸಲಾಗಿದೆ) ಅವರ ಮಧುವೆ ದಿನಾಂಕ 16-03-2023 ರಂದು ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿರುವ ಸುಮುಖ ಭವನದಲ್ಲಿ ನಿಶ್ಚಯವಾಗಿತ್ತು.
ಅದರಂತೆ ವಧು ವರ ಸಮೇತ ಅವರ ಪೋಷಕರು ದಿನಾಂಕ 15-03-2023ರಂದು ಮದುವೆ ಮಂಟಪಕ್ಕೆ ಬಂದು ಅರಿಶಿಣ ಶಾಸ್ತ್ರ ಮುಗಿಸಿದ್ದಾರೆ.

ದಿಢೀರನೆ ಪ್ರತ್ಯಕ್ಷನಾದ ಯುವತಿಯ ಪ್ರೇಮಿ.

ಈ ವೇಳೆ ಯುವತಿಯ ಮಾಜಿ ಪ್ರಿಯಕರ ಸಂತೋಷ್ ( ಹೆಸರು ಬದಲಿಸಿದೆ) ದಿಢೀರನೆ ಪ್ರತ್ಯಕ್ಷನಾಗಿ ಯುವತಿಯ ಜೊತೆಗೆ ತೆಗೆಸಿಕೊಂಡಿದ್ದ ಭಾವಚಿತ್ರಗಳನ್ನು ಪ್ರದರ್ಶಿಸಿ ಬೇರೆಯವನ ಜೊತೆಗೆ ಮದುವೆಯಾಗುತ್ತಿರುವ ಬಗ್ಗೆ ಗಲಾಟೆ ಎಬ್ಬಿಸಿದ್ದಾನೆ. ಕೋಪಗೊಂಡ ಯುವತಿಯ ಪೋಷಕರು ತಕ್ಷಣ ಆತನನ್ನು ಕಳ್ಳ, ಕಳ್ಳ ಎಂದು ಕೂಗಿ ಅಟ್ಟಿಸಿಕೊಂಡು ಹೋಗಿ ಛತ್ರದ ಅನತಿ ದೂರದಲ್ಲಿ ಆತನ ಕತ್ತು ಕೊಯ್ದು ಪರಾರಿಯಾಗಿದ್ದಾರೆ.

ಈ ವೇಳೆ ಅಲ್ಲೇ ಇದ್ದ ಸ್ಥಳೀಯರು 112 ಗೆ ಮಾಡಿದ್ದು ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆ ಪೊಲೀಸರು ಸಂತೋಷನಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಫತ್ರೆಗೆ ದಾಖಲು ಮಾಡಿದ್ದಾರೆ.

ಏನು ಇವರ 'ಪ್ರೇಮ್ ಕಹಾನಿ'?

10 ನೇ ತರಗತಿಯಲ್ಲಿ ಈ ಪ್ರೇಮಿ ಮತ್ತು ಹಸೆಮಣೆ ಏರಿದ್ದ ಯುವತಿ ಜತೆಯಲ್ಲಿ ಓದಿದ್ದರು. 10ನೇ ಬ್ಯಾಚ್ ವಾಟ್ಸ್ಆಪ್ ಗ್ರೂಪ್​ನಿಂದ ಮತ್ತೆ ಒಂದಾಗಿದ್ದ ಇವರ ಸ್ನೇಹ ಮಾತುಕತೆಯಲ್ಲಿ ಗಾಢವಾಗಿತ್ತು ಎನ್ನಲಾಗಿದೆ.

ಆದರೆ ಯುವತಿ, ಸಂತೋಷನ ಪ್ರೇಮ ನಿವೇದನೆಯನ್ನು ನಿರಾಕರಿಸಿ ಇಂದು ಬೇರೋಬ್ಬನ ಜೊತೆ ಮದುವೆಯಾಗಲು ಹೊರಟಿದ್ದಳು ಎನ್ನಲಾಗಿದೆ. ಮದುವೆಯಾಗುತ್ತಿದ್ದ ವೇಳೆ ಸಂತೋಷ್​ ಬಂದು ಕಲ್ಯಾಣ ಮಂಟಪದಲ್ಲಿ ಗಲಾಟೆ ಮಾಡಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದಲ್ಲಿ ಈ ಘಟನೆ ನಡೆದಿದ್ದು ಈ ಪ್ರದೇಶ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net