More

    ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!

    ಸೋಲಿನ ಭೀತಿಯಿಂದ ಪತರಗುಟ್ಟಿದೆ ಕಾಂಗ್ರೆಸ್ಸು!ಮೋದಿ ಹವಾ ಶುರುವಾಗುತ್ತಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ವಿಸ್ತಾರವಾದ ರ್ಯಾಲಿಯ ಮೂಲಕ ಅವರು ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದ್ದಾರೆ! ಅಣ್ಣಾಮಲೈ ಹೇಳಿದ್ದು ನಿಜ, ಮೋದಿ ಆಗಮನಕ್ಕಿಂತ ಮುಂಚೆ ಕಾಂಗ್ರೆಸ್ಸಿನ ಗೆಲುವು ಹೆಚ್ಚು-ಕಡಿಮೆ ನಿಶ್ಚಿತವಾಗಿತ್ತು. ಅವರು ತಮ್ಮದ್ದೇ ಆದ ಭಿನ್ನ-ಭಿನ್ನ ವಿಧಾನಗಳ ಮೂಲಕ ಜನರನ್ನು ಒಪ್ಪಿಸಿಬಿಟ್ಟಿದ್ದರು. ಮೋದಿ ಪ್ರಚಾರದ ಅಬ್ಬರ ಶುರುವಾಯ್ತು ನೋಡಿ, ದಿನೇ ದಿನೇ ಕಾಂಗ್ರೆಸ್ಸಿನ ಸಂಖ್ಯೆ ಕುಸಿಯುತ್ತಾ ಬಂದು, ಪ್ರಚಾರದ ಆರಂಭಕ್ಕೂ ಮುನ್ನ ಕಾಂಗ್ರೆಸ್ಸು ಯಾವ ಸ್ಥಿತಿಯಲ್ಲಿತ್ತೋ ಬಿಜೆಪಿ ಆ ಸ್ಥಿತಿಗೆ ತಲುಪಿತು ಮತ್ತು ನರೇಂದ್ರ ಮೋದಿ ಆಗಮನಕ್ಕೂ ಮುನ್ನ ಬಿಜೆಪಿಗೆ ಯಾವ ದೈನೇಸಿ ಸ್ಥಿತಿಯಿತ್ತೋ ಆ ಹಂತಕ್ಕೆ ಕಾಂಗ್ರೆಸ್ಸು ಇಳಿಯಿತು. ಬೆಂಗಳೂರಿನ ರ್ಯಾಲಿಯಂತೂ ಬಹುಶಃ ಈ ದೇಶದ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾದ್ದು ಮತ್ತು ಜಗತ್ತಿನ ರಾಜಕಾರಣವೇ ನೆನಪಿಟ್ಟುಕೊಳ್ಳುವಂಥದ್ದು. ನಾಡಿನಲ್ಲೆಲ್ಲ ಚರ್ಚೆ ರ್ಯಾಲಿಯದ್ದಷ್ಟೇ ಅಲ್ಲ, ಮೋದಿಗಿರುವ ಅಂತಃಶಕ್ತಿಯದ್ದೂ ಕೂಡ. ದಿನಕ್ಕೆ ಮೂರು ಕಾರ್ಯಕ್ರಮ, ರ್ಯಾಲಿಗಳು, ನಡು-ನಡುವೆ ಅತ್ಯಂತ ಪ್ರಮುಖವಾದ ಮೀಟಿಂಗುಗಳು, ರಾತ್ರಿ ಕಳೆದು ಬೆಳಗ್ಗೆ ಏಳುವಾಗ ಮತ್ತದೇ ಉತ್ಸಾಹ-ಉಲ್ಲಾಸ. ಈ ಮನುಷ್ಯ ದೇವಮಾನವನೇ ಸರಿ! ಕಾಂಗ್ರೆಸ್ಸು ಅನಿವಾರ್ಯವಾಗಿ ಸುಳ್ಳುಗಳನ್ನು ಹರಡಿಸುವ ಪರಿಸ್ಥಿತಿಗೆ ತಲುಪಿದೆ. ಬಿ.ಎಲ್ ಸಂತೋಷ್ ಅವರು ಲಿಂಗಾಯತರ ವಿರುದ್ಧ ಆಡಿದ್ದಾರೆ ಎನ್ನಲಾಗುವ ಮಾತಿನಿಂದ ಹಿಡಿದು ಮೋದಿಯ ಪರವಾಗಿ ಬ್ಯಾಟಿಂಗ್ ಮಾಡುವ ಭರದಲ್ಲಿ ನಾನು ಸಾಮಾನ್ಯ ನಾಗರಿಕರನ್ನು ಬೈದಿದ್ದೇನೆ ಎನ್ನುವವರೆಗೆ ಅವರು ಕೆಳಮಟ್ಟದ ಪ್ರಚಾರಕ್ಕೆ ಇಳಿದಿದ್ದಾರೆ. ಈ ಹತಾಶ ಮನೋಭಾವವೇ ಅವರ ಸೋಲಿಗೆ ಸಾಕ್ಷಿ ನೀಡುತ್ತಿದೆ. ಪ್ರತಿ ಹಂತದಲ್ಲೂ ಮೋದಿಗೆ ಮತ ಹಾಕುವುದೇ ಸರಿಯಾದ್ದು ಎಂದು ಜನರಲ್ಲಿ ವಿಶ್ವಾಸ ಮೂಡಿಸುತ್ತಿದೆ.

    ಆರಂಭದಿಂದಲೂ ಪ್ರಚಾರದ ವಿಚಾರದಲ್ಲಿ ಮೇಲುಗೈ ಇದ್ದದ್ದು ಕಾಂಗ್ರೆಸ್ಸಿನದ್ದೇ. ಭ್ರಷ್ಟ ಸರ್ಕಾರ ಎನ್ನುವ ವಿಚಾರವನ್ನು ಸಮಾಜದ ಮುಂದೆ ಯಾವ ಪುರಾವೆಯೂ ಇಲ್ಲದೆ ಒಪ್ಪಿಸಿಬಿಟ್ಟಿದ್ದರು. ಸರ್ಜಿಕಲ್ ಸ್ಟ್ರೈಕ್​ಗೂ ಪೂ›ಫ್ ಕೇಳುವ ಈ ಕಾಂಗ್ರೆಸ್ಸಿಗರು ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವಾಗ ಪುರಾವೆ ಕೊಡಬೇಕೆಂಬ ಸಾಮಾನ್ಯಜ್ಞಾನವನ್ನೂ ಇಟ್ಟುಕೊಳ್ಳದಿದ್ದುದು ಅಚ್ಚರಿಯೇ ಸರಿ. ಹೀಗಾಗಿ, ಅವರ ಪ್ರಚಾರದ ಭರಾಟೆ ಜೋರಾಗಿದ್ದರೂ ಜನಕ್ಕೆ ಅದು ರುಚಿಸಲಿಲ್ಲ. ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಹತಪ್ರಭರೆನಿಸಿದರೂ ಬರು-ಬರುತ್ತಾ ಅದನ್ನು ಮೀರಿ ಬೆಳೆಯಲು ಸಾಧ್ಯವಾಯ್ತು. ಇಷ್ಟಕ್ಕೂ ಭ್ರಷ್ಟಾಚಾರದ ಆರೋಪ ಮಾಡಿದ ಕಾಂಗ್ರೆಸ್ಸಿಗರು ಶುದ್ಧರಾಗಿದ್ದರೇನು? ಯುಪಿಎ-2 ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರಗಳು ಇನ್ನೂ ಕನಿಷ್ಠ ಎರಡು ಅವಧಿಯವರೆಗೆ ಮೋದಿಯವರಿಗೆ ಗೆಲುವು ತಂದುಕೊಡಬಲ್ಲಷ್ಟಿದೆ. ಹೀಗಿರುವಾಗ ಮೋದಿಯನ್ನು, ಅವರ ಸರ್ಕಾರವನ್ನು ಭ್ರಷ್ಟರೆನ್ನುವುದಕ್ಕೆ ಕಾಂಗ್ರೆಸ್ಸಿಗೆ ನೈತಿಕವಾದ ಯಾವ ಅರ್ಹತೆಯೂ ಇಲ್ಲ. ಅದೇ ಅವರಿಗಾದ ಬಲುದೊಡ್ಡ ಹಿನ್ನಡೆ. ಇಂದು ನೆಲಮಟ್ಟದಲ್ಲಿ ಬಿಜೆಪಿಯ ಭ್ರಷ್ಟಾಚಾರ ಚರ್ಚೆಯ ವಸ್ತುವೇ ಅಲ್ಲ, ಏಕೆಂದರೆ ಇಂಧನ ಖಾತೆ ಸಚಿವರಾಗಿ ಡಿ.ಕೆ ಶಿವಕುಮಾರ್ ನಡೆಸಿದ್ದ ಕಾರುಬಾರೇನೆಂಬುದು ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಈ ಕಾರಣದಿಂದಲೇ ಭಿನ್ನ ಭಿನ್ನ ಪ್ರಚಾರ ತಂತ್ರ ಬಳಸಿದ ಕಾಂಗ್ರೆಸ್ಸು ಕಾರ್ಯಕರ್ತರ ಸ್ಪೂರ್ತಿಗಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ತನ್ನ ಸಂಪೂರ್ಣ ಶ್ರಮವನ್ನು ವ್ಯಯಿಸಿತು, ಹಣವನ್ನೂ ಕೂಡ. ಆಯಾ ಕ್ಷೇತ್ರಗಳಲ್ಲಿ ರಾಹುಲ್​ರನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಟಿಕೆಟ್ ಆಕಾಂಕ್ಷಿಗಳಿಗೆ ನೀಡಲಾಯ್ತು. ಸಹಜವಾಗಿಯೇ ಟಿಕೆಟ್ ತಪ್ಪಿದ ನಂತರ ಕೈಸುಟ್ಟುಕೊಂಡಿದ್ದ ಇವರೆಲ್ಲ ತಿರುಗಿನಿಂತರು. ಇಷ್ಟಾದರೂ ಕಾಂಗ್ರೆಸ್ಸು ಜನರ ಮುಂದೆ ಒಗ್ಗಟ್ಟಿನ ಮಂತ್ರ ಪಠಿಸುವಲ್ಲಿ ಯಶಸ್ವಿಯಾಯ್ತು. ಒಳಗಿನ ಬೆಂಕಿ ಮಾತ್ರ ಆರಿರಲಿಲ್ಲ. ಇತ್ತೀಚೆಗೆ ಪತ್ರಕರ್ತೆಯೊಬ್ಬರು ಈ ಕಾದಾಟದ ಕುರಿತಂತಹ ಪ್ರತ್ಯಕ್ಷ ಅನುಭವವನ್ನು ಹೇಳಿಕೊಂಡಿದ್ದಾರೆ. ವೇದಿಕೆಯ ಮೇಲೆ ರಾಹುಲ್ ಸಿದ್ದರಾಮಯ್ಯ ಮತ್ತು ಡಿಕೆಶಿ ಕೈ-ಕೈ ಹಿಡಿದು ನಿಲ್ಲುವಂತೆ ಮಾಡಿದ ನಂತರ ಸಿದ್ದರಾಮಯ್ಯ ಜನಮೆಚ್ಚುವ ಭಾಷಣ ಮಾಡಿದರಂತೆ. ಒಳಗೊಳಗೇ ಕುದಿಯುತ್ತಿದ್ದ ಡಿಕೆಶಿ ಆ ಪತ್ರಕರ್ತೆ ಮಾತನಾಡಿಸತೊಡಗಿದಾಗ, ‘ಹೋದೆಡೆಯೆಲ್ಲಾ ಇದನ್ನೇ ಮಾತನಾಡುತ್ತಾನೆ, ಹೊಸತೇನಿದೆ?’ ಎಂದು ಮೂದಲಿಸಿದರಂತೆ. ಜನರ ಮುಂದೆ ಕೈ-ಕೈ ಹಿಡಿದವರು ಹಿಂದೆ ಉರಕೊಂಡು ಹೇಗೆ ಕೈ-ಕೈ ಮಿಲಾಯಿಸುತ್ತಾರೆ ನೋಡಿ ಎಂದು ಆ ಪತ್ರಕರ್ತೆ ಕುಹಕವಾಡಿರುವುದು ಟ್ವಿಟರ್​ನಲ್ಲಿ ದೊಡ್ಡ ಸದ್ದು ಮಾಡಿತು. ಇಷ್ಟಾದರೂ ಬಿಜೆಪಿಯವರಿಗಿಂತ ಹೆಚ್ಚು ಬಲವಾದ ಏಕತೆಯನ್ನು ಪ್ರದರ್ಶಿಸಿದ್ದು ಕಾಂಗ್ರೆಸ್ಸೇ! ಆದರೆ ಅವರು ಎಡವಿದ್ದು ಎಲ್ಲಿ ಗೊತ್ತೇ? ಆರಂಭದ ಮೋದಿಯ ಹವಾ ಬಿರುಗಾಳಿಯಾಗಿ ಪರಿವರ್ತಿತಗೊಳ್ಳುತ್ತಿದೆ ಎಂದರಿವಾದಾಗ.

    ಇಡಿಯ ಮಾಧ್ಯಮವನ್ನು ಮೋದಿಯಿಂದ ಬೇರೆಡೆಗೆ ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ಸು ಬಜರಂಗದಳವನ್ನು ಬಳಸಿಕೊಂಡಿತು. ಅದಾಗಲೇ ಬಜರಂಗದಳದ ಕಾರ್ಯಕರ್ತರು ಅನೇಕ ಕಡೆಗಳಲ್ಲಿ ಬಿಜೆಪಿ ವಿರುದ್ಧ ಕೂಗಾಡಿದ್ದರಲ್ಲದೆ, ಬಂಡಾಯದ ಬಾವುಟ ಬೀಸಿದ್ದರು. ಹಳೆಯ ಕಾರ್ಯಕರ್ತರು ತಟಸ್ಥವಾಗಿ ಚುನಾವಣೆಯೇ ಬೇಡವೆಂದು ಬದಿಗೆ ಸರಿದುಬಿಟ್ಟಿದ್ದರು. ಹೀಗಾಗಿ, ಈ ಹೊತ್ತಿನಲ್ಲಿ ಬಜರಂಗದಳದ ಕುರಿತು ಮಾತನಾಡಿದರೆ ಆ ಕಾರ್ಯಕರ್ತರೇನು ಮುಂದೆ ಬರುವುದಿಲ್ಲ, ಬದಲಿಗೆ ಮಾಧ್ಯಮದ ಚರ್ಚೆಯೆಲ್ಲಾ ಹಿಂದುತ್ವದ ಕುಕೃತ್ಯದ ಕಡೆಗೆ ತಿರುಗುತ್ತದೆ. ಮೋದಿ ಅದಕ್ಕೆ ಉತ್ತರಿಸುವಲ್ಲಿ ಹೈರಾಣಾಗುತ್ತಾರೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತು. ಒಂದು ವೇಳೆ ಬಜರಂಗಿಗಳು ಪ್ರತಿಭಟನೆಗೆಂದು ಬಂದರೂ ಕಾಂಗ್ರೆಸ್ ನಾಯಕರ ಘೕರಾವ್ ಮಾಡುವುದು, ಗಾಡಿಗಳ ಮೇಲೆ ಕಲ್ಲೆಸೆಯುವುದು ಮಾಡಿ ಕಾಂಗ್ರೆಸ್ಸಿಗರನ್ನು ಮಾಧ್ಯಮಗಳ ಮುಂದೆ ಅಳುವುದಕ್ಕೆ ಪ್ರೇರೇಪಿಸುತ್ತದೆ. ಮೋದಿಯವರ ಬಿರುಗಾಳಿಗೆ ಇದು ಪ್ರತಿದಾಳವೆಂಬುದು ಅವರ ಲೆಕ್ಕಾಚಾರವಾಗಿತ್ತು. ಸದಾ ಉಗ್ರವಾಗಿರುವ ಚಿಂತನೆ ಹೊಂದಿರುವ ಬಜರಂಗದಳದ ಕಾರ್ಯಕರ್ತರು ಈ ಬಾರಿ ಶಾಂತ ಪ್ರತಿಭಟನೆಗೆ ಮುಂದಾದದ್ದು ಕಾಂಗ್ರೆಸ್ಸಿನ ಪಾಲಿಗೆ ಔಟ್ ಆಫ್ ಸಿಲಬಸ್ಸು. ಮಂದಿರ ಮಂದಿರಗಳಲ್ಲಿ ಹನುಮಾನ್ ಚಾಲಿಸಾ ಪಠಣ ಬಜರಂಗಿಯನ್ನು, ಬಜರಂಗದಳವನ್ನು ಸಮೀಕರಿಸಿಬಿಟ್ಟಿತು. ಪಿಎಫ್​ಐನೊಂದಿಗೆ ಬಜರಂಗದಳವನ್ನು ಸಮೀಕರಿಸಿದ ಕಾಂಗ್ರೆಸ್ಸು ನಾಳೆ ಮಂದಿರಕ್ಕೆ ಹೋಗುವ ಸಾಮಾನ್ಯ ಕಾರ್ಯಕರ್ತರನ್ನು ಭಯೋತ್ಪಾದಕರೆನ್ನಲು ಹಿಂಜರಿಯುವುದಿಲ್ಲ ಎಂದೆನಿಸಿಬಿಟ್ಟಿತ್ತು ಜನರಿಗೆ. ಹೀಗಾಗಿ, ಮನೆ-ಮನೆಯಲ್ಲೂ ಜನ ಆಕ್ರೋಶದಿಂದ ಕುದಿಯಲಾರಂಭಿಸಿದರು. ತನ್ನ ದಾಳ ತನಗೇ ತಿರುಮಂತ್ರವಾಗಿದ್ದು ಕಂಡು ಬೆಚ್ಚಿದ ಡಿಕೆಶಿ ಆಂಜನೇಯನ ಪಾದಗಳಿಗೆ ಹಣೆಹಚ್ಚಿ ನಾನೂ ಹನುಮ ಭಕ್ತನೇ ಎಂದಿದ್ದು ಅವರ ಮೊದಲ ಸೋಲು.

    ಕಾಂಗ್ರೆಸ್ಸು ಎಂದಾದರೂ ಹಿಂದೂಗಳ ಪರವಾಗಿ ನಿಂತಿದ್ದು ನೆನಪಿದೆಯೇನು? ರಾಮ ಹುಟ್ಟಿದ್ದೇ ಸುಳ್ಳು ಎಂದು ಅವನ ಅಸ್ತಿತ್ವ ಪ್ರಶ್ನಿಸಿದವರು ಇವರು, ನ್ಯಾಯಾಲಯಕ್ಕೆ ಹಾಗೊಂದು ಅಫಿಡವಿಟ್ ಸಲ್ಲಿಸಿದರು ಕೂಡ. ರಾಮಸೇತು ಉಳಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂಬುದು ಅವರ ಭಾವನೆಯಾಗಿತ್ತು. ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನ ಡಿಗ್ರಿ ಪಡೆದಿದ್ದಾನೆ ಎಂದು ಕುಹಕವಾಡಿದ್ದರು ಇವರೆಲ್ಲ. ರಾಮ ಮಂದಿರದ ನಿರ್ವಣಕ್ಕೆಂದು ಮುಂದಡಿಯಿಟ್ಟಿದ್ದ ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿದವರು ಇವರು. ಕರಸೇವೆ ಮುಗಿಸಿ ಮರಳುತ್ತಿದ್ದ ರಾಮಭಕ್ತರನ್ನು ಮುಸಲ್ಮಾನರು ಗೋದ್ರಾದಲ್ಲಿ ರೈಲಿನಲ್ಲಿ ಜೀವಂತ ದಹಿಸಿದಾಗ ಅವರ ಬೆಂಬಲಕ್ಕೆ ನಿಂತಿದ್ದು ಇದೇ ಮಂದಿ. ರಾಮನ ಕುರಿತಂತೆ ಅವಹೇಳನಕಾರಿ ಮಾತುಗಳನ್ನು ಟಿವಿ ಡಿಬೆಟ್​ಗಳಲ್ಲಿ ಆಡುತ್ತಾ ಹಿಂದೂಗಳನ್ನು ಮತ್ತೆ-ಮತ್ತೆ ನೋಯಿಸಿದರು. ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ವಣವಾಗುವುದಕ್ಕೆ ಅಡ್ಡಗಾಲು ಹಾಕಿ, ಅದನ್ನು ವಿವಾದಿತ ಪ್ರದೇಶವಾಗಿ ಉಳಿಸಿದ್ದಲ್ಲದೆ, 67 ಎಕರೆ ಜಮೀನಿಗೆ ಮತ್ತೊಬ್ಬ ಫಲಾನುಭವಿಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದೂ ಅವರೇ. ಹಿಂದೂಗಳಲ್ಲಿ ಒಡಕು ತಂದು ಮುಸಲ್ಮಾನರಿಗೆ ಲಾಭ ಮಾಡಿಕೊಡುವ ಅವರ ಪ್ರಯತ್ನ ಒಂದೆರಡೇನು? ರಾಮ ಮಂದಿರಕ್ಕೇ ಇಷ್ಟೆಲ್ಲ ವಿರೋಧ ಮಾಡಿದ್ದ ಈ ಮಂದಿ ಆಂಜನೇಯನ ಪಾದಗಳಿಗೆ ಹಣೆ ಹಚ್ಚಿದ್ದಾರೆಂದರೆ ಅದು ಮೋದಿಯವರ ಬಜರಂಗಬಲಿ ಘೊಷಣೆಗಲ್ಲದೆ ಮತ್ಯಾವುದಕ್ಕೆ ಹೇಳಿ? ನಾವೆಲ್ಲ ಹನುಮ ನಾಡಿನವರು ನಿಜ. ಆದರೆ, ಕಾಂಗ್ರೆಸ್ಸಿಗರ ಬಾಯಲ್ಲೂ ಹನುಮನ ನಾಮ ಬರುವಂತೆ ಮಾಡಿದ ಮೋದಿ ನಿಜಕ್ಕೂ ಶ್ರೇಷ್ಠ ಹನುಮ ಸೇವಕ. ಹೀಗಾಗಿಯೇ ಜನ ಊರೂರಲ್ಲೂ ಅವರನ್ನು ಅಪ್ಪಿಕೊಳ್ಳಲು ಸಿದ್ಧವಾಗಿಬಿಟ್ಟಿದ್ದಾರೆ.

    ತಾವು ಎಸೆದ ದಾಳ ಉಲ್ಟಾ ಹೊಡೆಯುತ್ತಿದೆ ಎಂದು ಗೊತ್ತಾದೊಡನೆ ಆಂಜನೇಯನಿಗೆ ಮಂದಿರ ಕಟ್ಟಿಕೊಡುವ, ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಹಿಂದೂಗಳ ಓಲೈಕೆಯ ಮಂತ್ರವನ್ನು ಕಾಂಗ್ರೆಸ್ಸು ಪಠಿಸುತ್ತಿದ್ದಂತೆ ಮುಸಲ್ಮಾನರಿಗೆ ಅಸಮಾಧಾನವೂ ಅನುಮಾನವೂ ಶುರುವಾಯ್ತು. ಅವರೀಗ ಪೂರಾ ಗೊಂದಲದಲ್ಲಿದ್ದಾರೆ. ಅದಾಗಲೇ ಸತ್ತಿದ್ದ ಪಿಎಫ್​ಐ ಅನ್ನು ಬ್ಯಾನ್ ಮಾಡುತ್ತೇನೆ ಎನ್ನುವುದು ಎಷ್ಟು ಮೂರ್ಖ ಸಂಗತಿಯಾಗಿತ್ತೋ, ಬಜರಂಗದಳವನ್ನು ಬ್ಯಾನ್ ಮಾಡುವುದು ಸ್ಥಳೀಯ ಸರ್ಕಾರಕ್ಕೆ ಅಸಾಧ್ಯವಾದ ಸಂಗತಿ ಎನ್ನುವುದು ಮುಸಲ್ಮಾನರಿಗೆ ತಿಳಿಯದುದೇನಾಗಿರಲಿಲ್ಲ. ಹೀಗಾಗಿ, ಅವರೊಳಗೆ ಆಕ್ರೋಶದ ಬೀಜವಂತೂ ಬಿತ್ತಿದೆ. ಇತ್ತ ಹಿಂದೂ ಕಾರ್ಯಕರ್ತರು ಹಠಹಿಡಿದು ಅಖಾಡಕ್ಕೆ ಧುಮುಕಿದರೆ ಅತ್ತ ಮುಸಲ್ಮಾನರು ಕಾಂಗ್ರೆಸ್ಸಿನ ಪಲಾಯನವಾದಿ ರಾಜಕಾರಣ ಕಂಡು ಇವರಿಂದ ಒಂದು ಹೆಜ್ಜೆ ಹಿಂದೆ ಸರಿದಿರುವುದಂತೂ ಸ್ಪಷ್ಟ. ಈಗ ಕಾಂಗ್ರೆಸ್ಸಿಗೆ ಉಳಿದಿರುವುದು ಒಂದೇ ಮಾರ್ಗ- ಹಿಂದೂಗಳನ್ನು ಜಾತಿ-ಜಾತಿಗಳಲ್ಲಿ ಒಡೆಯುವುದು. ಹೀಗಾಗಿಯೇ ಬ್ರಾಹ್ಮಣ ಮತ್ತು ಲಿಂಗಾಯತರನ್ನು ಎತ್ತಿಕಟ್ಟುವ ಪ್ರಯತ್ನ ಆರಂಭಿಸಿದರು. ಬಿ.ಎಲ್.ಸಂತೋಷರನ್ನು ಇದಕ್ಕೆ ದಾಳವಾಗಿ ಉಪಯೋಗಿಸಬೇಕೆಂದು ಫೇಕ್ ಸುದ್ದಿ ಸೃಷ್ಟಿಸಿದರು. ಇದ್ಯಾವುದಕ್ಕೂ ಎಂದಿಗೂ ತಲೆಕೆಡಿಸಿಕೊಳ್ಳದ ಅವರು ಈ ಬಾರಿ ಮಾತ್ರ ಹಠಕ್ಕೆ ಬಿದ್ದು ಸುದ್ದಿ ಹರಿದಾಡಿಸಿದವನ ವಿರುದ್ಧ ಕ್ರಮ ಕೈಗೊಂಡಿದ್ದಿದೆಯಲ್ಲ, ಇದು ಲಿಂಗಾಯತರ ಕಣ್ತೆರೆಸುವಂಥದ್ದು. ಹಾಗೆ ನೋಡಿದರೆ ವೀರಶೈವರನ್ನೂ ಲಿಂಗಾಯತರನ್ನೂ ಒಡೆದು ಮತಗಳನ್ನು ಬಾಚಿಕೊಳ್ಳಲು ಯತ್ನಿಸಿದ್ದು ಸಿದ್ದರಾಮಯ್ಯ ಮತ್ತವರ ತಂಡವೇ ಅಲ್ಲವೇನು? ಚುನಾವಣೆಯವರೆಗೂ ಹೋರಾಟಕ್ಕೆ ಕಾವು ತಂದುಕೊಡುವಲ್ಲಿ ದುಡಿದ ಈ ನಾಯಕರು ಆನಂತರ ಲಿಂಗಾಯತರ ಬಳಿಯೂ ಸುಳಿಯಲಿಲ್ಲವೆಂಬುದು ಸತ್ಯವಲ್ಲವೇನು? ಮೊದಲಾದರೆ ಜನ ಮರೆತುಬಿಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮತ್ತೆ ಮತ್ತೆ ನೆನಪಿಸುವ ವ್ಯವಸ್ಥೆ ಇರುವುದರಿಂದ ಕಾಂಗ್ರೆಸ್ಸು ಕಂಗಾಲಾಗಿರುವುದು ಕಾಣುತ್ತದೆ. ಜಾತಿ-ಜಾತಿಗಳು ಮೋದಿ ರ್ಯಾಲಿಯ ನಂತರ ಜಾತಿಯನ್ನೇ ಮರೆತು ಮೋದಿಯ ಮಾತಿಗೆ ಮತಹಾಕುವ ಹಂತಕ್ಕೆ ಬಂದಿರುವುದು ಕಾಂಗ್ರೆಸ್ಸಿಗರಿಗೆ ಸಹಿಸಲಾಗದ ಸುದ್ದಿ.

    ನರೇಂದ್ರ ಮೋದಿ ಈ ಬಾರಿ ಬಹುಮತದ ಸರ್ಕಾರ ಕೇಳಿಕೊಂಡಿದ್ದಾರೆ. ಪ್ರತಿ ಬಾರಿ 104ಕ್ಕೆ ನಿಲ್ಲಿಸುತ್ತೇವಲ್ಲ, ಅದು ಬಿಜೆಪಿಯನ್ನು ಅನಿವಾರ್ಯವಾಗಿ ಕೆಡುಕಿನತ್ತ ದೂಡುತ್ತದೆ. ಆಪರೇಷನ್ ಕಮಲಕ್ಕೆ ಪ್ರೇರೇಪಿಸುತ್ತದೆ. ಒಮ್ಮೆ ಪೂರ್ಣ ಬಹುಮತ ಕೊಟ್ಟರೆ ಉತ್ತರ ಪ್ರದೇಶದಲ್ಲಿ ನೀಡಿದಂತಹ ಸಮರ್ಥ ಆಡಳಿತವನ್ನು ಕರ್ನಾಟಕಕ್ಕೂ ನೀಡಬಹುದೆಂದು ಅವರ ಬಯಕೆ. ಹೀಗಿರುವಾಗ ಜವಾಬ್ದಾರಿಯುತವಾಗಿ ಮತ ಸಲ್ಲಿಸುವುದು ನಮ್ಮ ಹೊಣೆ. ಬಿಜೆಪಿ ಈ ಬಾರಿ 70ಕ್ಕೂ ಹೆಚ್ಚು ಹೊಸಮುಖಗಳನ್ನು ಪರಿಚಯಿಸಿದೆ. ಇವರಲ್ಲಿ ಬಹುತೇಕರು ಸಾಮಾನ್ಯ ಕಾರ್ಯಕರ್ತರು, ಕೆರೆದರೂ ಅಕೌಂಟಿನಲ್ಲಿ ನಾಲ್ಕಾರು ಲಕ್ಷ ಸಿಗದವರು. ಬಿಜೆಪಿಯ ಈ ಪ್ರಯೋಗಕ್ಕೆ ಸೋಲಾದರೆ ಇನ್ನೆಂದೂ ಯಾರೂ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಯತ್ನ ಮಾಡಲಾರರು. ಟಿಕೆಟ್ ಕೊಡುವ ಮುನ್ನ ಅಪ್ಪ ಶಾಸಕನಾಗಿದ್ದಾನಾ ಎಂದು ಗುರುತಿಸಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಅಲ್ಲಿಗೆ ಕಾರ್ಯಕರ್ತನ ಸಮಾಧಿ. ಕಾಂಗ್ರೆಸ್ಸಿನ ಕಾರ್ಯಕರ್ತರೂ ಈ ಕುರಿತಂತೆ ಗಂಭೀರವಾಗಿ ಯೋಚಿಸಬೇಕಿದೆ. ಸಾಯುವ ಕೊನೇ ಕ್ಷಣದಲ್ಲೂ ಕುರ್ಚಿಯ ಮೇಲಿರಬೇಕೆಂದು ಬಯಸುವ ಮಂದಿಯ ಜೀತ ಮಾಡಬಾರದೆಂದರೆ ಈ ಬಾರಿ ಅವರೂ ಬಿಜೆಪಿಗೆ ಮತಹಾಕಿ ಕಾರ್ಯಕರ್ತರಿಗೆ ಟಿಕೆಟ್ ಕೊಡುವ ಈ ವಿಚಾರಧಾರೆಯನ್ನು ಗೆಲ್ಲಿಸಬೇಕಿದೆ. ಆಗಮಾತ್ರ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಾದರೂ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇಲ್ಲವಾದರೆ ಅಪ್ಪ, ಮಗ, ಮೊಮ್ಮಗ, ಮರಿಮಕ್ಕಳ ಪರಂಪರೆ ವರುಣಾದಲ್ಲಿ ಮುಂದುವರಿದಂತೆ ನಾಡಿನೆಲ್ಲೆಡೆಗೂ ಹಬ್ಬಲಿದೆ.

    ಈ ಕಾರಣಕ್ಕೇ ಮೇ 10 ಅತ್ಯಂತ ಪ್ರಮುಖವಾದ ದಿವಸ. ಮತ ಹಾಕಬೇಕೋ ಬೇಡವೋ ಎಂದು ಆಲೋಚಿಸುತ್ತಿರುವವರು ಮನೆಯಿಂದ ಹೊರಬನ್ನಿ. ಮೋದಿಯವರು ಕೇಳಿಕೊಂಡಂತೆ ಒಮ್ಮೆಅವರಿಗೆ ಬಹುಮತ ಕೊಡೋಣ. ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಮೋದಿಗೆ ಬಲಗೈಯಾಗಿ ಮುನ್ನುಗ್ಗಲೆಂದು ಪ್ರಾರ್ಥಿಸೋಣ ಮತ್ತು 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸಲು ಈಗ ಅವರ ಗೆಲುವು ಮುಖ್ಯ ಎನ್ನುವುದನ್ನು ಮರೆಯದಿರೋಣ. ಹೌದಲ್ಲವೇ?

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts