

ಮಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವರ್ಗಾವಣೆ ದಂಧೆಗಾಗಿಯೇ ವ್ಯಾಪಾರ ಮಳಿಗೆ ಒಂದನ್ನೂ ತೆರೆದಿದ್ದು, ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ಧಾರೆ.
ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಕಟೀಲ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರೂ ಮಾಡಿರುವ ಆರೋಪಗಳು ನಿಜವಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಗರಪಾಲಿಕೆ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿಯೂ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದ್ದಾರೆ.
ಜನಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದರೂ ಯಾವುದೇ ಕೆಲಸ ಆಗುತ್ತಿಲ್ಲ. ಪ್ರತಿ ಹುದ್ದೆಗೆ ಹಾಗೂ ಅಧಿಕಾರಿಗಳ ವರ್ಗಾವಣೆಗೆ ದರವನ್ನು ನಿಗದಿ ಮಾಡಲಾಗಿದೆ. ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳೂ ನಡೆಯುತ್ತಿಲ್ಲ. ಸ್ವತಃ ಅಧಿಕಾರಿಗಳೇ ತಮ್ಮ ಬಳಿ ಒಂದು ಹಾಗೂ ಎರಡು ಕೋಟಿ ಕೇಳುತ್ತಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನಗೆಳಿಂದ ಅಭಿವೃದ್ಧಿ ಕಾರ್ಯಕ್ರಮಗಳೂ ಕುಂಠಿತವಾಗುತ್ತಿದೆ. ಸ್ವತಃ ಉಪಮುಖ್ಯಮಂತ್ರಿಗಳೇ ಈ ವಿಚಾರವನ್ನೂ ಒಪ್ಪಿಕೊಂಡಿದ್ದಾರೆ. ಆರ್ಥಿಕತೆಯ ಹೊಡೆತದಿಂದಾಗಿ ನಾವು ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ಏನಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಸರ್ಕಾರವನ್ನೂ ಸಿದ್ದರಾಮಯ್ಯನವರೂ ಯಾವ ಕಡೆ ಕೊಂಡೊಯ್ಯುತ್ತಾರೆ ಎಂಬುದನ್ನೂ ಯೋಚನೆ ಮಾಡಬೇಕಾಗಿದೆ.
ಈ ವಿಚಾರವನ್ನೂ ಸದನದಲ್ಲಿ ಬಿಜೆಪಿ ಶಾಸಕರೂ ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ. ಆದರೆ, ನಮ್ಮ ಪಕ್ಷದ ಶಾಸಕರನ್ನೂ ಸದನದಿಂದ ಅಮಾನತು ಮಾಡುವ ಮೂಲಕ ಕಾಂಗ್ರೆಸ್ ತನ್ನ ಹೀನಾಯ ಮನಸ್ಥಿತಿಯನ್ನೂ ತೋರಿಸಿದೆ. ದುರ್ವತನೆ ತೋರಿದ್ದಾರೆ ಎಂದು ಆರೋಪಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಸರ್ಕಾರದ ವಿರುದ್ಧ ಹೋರಾಟ ನಡೆಸಲೂ ಇನ್ನಷ್ಟು ಮಾಹಿತಿ ಹಾಗೂ ಅಂಕಿ-ಅಂಶಗಳನ್ನೂ ಕಲೆ ಹಾಕುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.