ಹೊರ ರಾಜ್ಯ, ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ವಾರಂಟೈನ್​

CM 15 March 20
Published on

ಬೆಂಗಳೂರು: ಹೊರ ರಾಜ್ಯ ಹಾಗೂ ವಿದೇಶಗಳಿಂದ ರಾಜ್ಯಕ್ಕೆ ಬರುವವರು ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೇರೆ ದೇಶ ಹಾಗೂ ರಾಜ್ಯದಿಂದ ಕನ್ನಡಿಗರು ವಾಪಸ್ ಬರುತ್ತಿದ್ದು ಅವರನ್ನು ಯಾವ ರೀತಿ ಕ್ವಾರಂಟೈನ್ ಮಾಡಬೇಕು ಎನ್ನುವ ಬಗ್ಗೆ ಸಿಎಂ ಚರ್ಚೆ ನಡೆಸಿದರು.

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು

* ಹೊರ ರಾಜ್ಯದಿಂದ ಬರುವ ಕನ್ನಡಿಗರು‌ ನಿರ್ದಿಷ್ಟ ವ್ಯವಸ್ಥೆಯಡಿ ಬರುವಂತೆ ಮಾಡಬೇಕು

* ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

* ಎಲ್ಲಿಗೆ ಬರುತ್ತೇವೆ ಮತ್ತು ಯಾವಾಗ ಬರುತ್ತೇವೆ ಎನ್ನುವುದನ್ನು ತಿಳಿಸಬೇಕು.

* ರಾಜ್ಯದಿಂದ ಅನಿರ್ವಾಯವಾಗಿ ಹೊರ ಹೋಗಿ ಸಂಕಷ್ಟದಲ್ಲಿ ಸಿಲುಕಿದವರಾಗಿರಬೇಕು.

* ನೋಂದಣಿ ಮಾಡಿಕೊಂಡವರನ್ನು ಕ್ವಾರಂಟೈನ್ ಸೌಲಭ್ಯಕ್ಕೆ‌ ಅನುಗುಣವಾಗಿ ಕರೆಯಿಸಿಕೊಳ್ಳಲಾಗುವುದು

* ಬಂದ ತಕ್ಷಣ ಯಾರೂ ಕೂಡ ಅವರ ಊರಿಗೆ ಹೋಗುವಂತಿಲ್ಲ, 14 ದಿನ‌ ಕ್ವಾರಂಟೈನ್ ಆಗಲೇಬೇಕು. ಇದಕ್ಕೆ ಸಿದ್ಧವಿದ್ದವರು ಮಾತ್ರ ನೋಂದಣಿ‌ ಮಾಡಿಕೊಳ್ಳಬೇಕು

* ಹೊರ ರಾಜ್ಯದಿಂದ ರೈಲುಗಳಲ್ಲಿ ಬರುವವರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸುತ್ತದೆ.

* ಬೇರೆ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರೂ ಇಲ್ಲಿಯೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಲೇಬೇಕು

* ಬೇರೆ ರಾಜ್ಯದಲ್ಲಿ ಮೃತರಾದರೆ ಶವಗಳನ್ನು ರಾಜ್ಯಕ್ಕೆ ತರುವಂತಿಲ್ಲ. ಎಲ್ಲಿ ಮೃತರಾಗಿರುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು

* ರಾಜ್ಯದಲ್ಲಿ ತೀರಿಕೊಂಡರೆ ತೀರಿಕೊಂಡ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಬೇಕು

ಸೋಮವಾರ (ಮೇ 11) ಪ್ರಧಾನಿನರೇಂದ್ರ ಮೋದಿ ಜತೆ ವಿಡಿಯೋ ಕಾನ್ಫರೆನ್ಸ್ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನಿಲುವು ಏನು ಇರಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ವಿದೇಶ ಹಾಗೂ ಬೇರೆ ರಾಜ್ಯದಿಂದಲೂ ಜನರು ಬರುತ್ತಿದ್ದಾರೆ. ಅವರ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರನ್ನು ಇನ್​ಸ್ಟಿಟ್ಯೂಟ್​ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಹೊರ ರಾಜ್ಯದಿಂದ ಬರುವವರಿಗೆ ಅವರ ಜಿಲ್ಲೆಯಲ್ಲೆ ಕ್ವಾರಂಟೈನ್ ಮಾಡಲಾಗುವುದು. ಬೇರೆ ರಾಜ್ಯದಿಂದ ಬರುವವರಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ. ಆ ರಾಜ್ಯದಲ್ಲಿ ತಪಾಸಣೆ ಮಾಡಿಸಿದ್ದರೂ ಇಲ್ಲಿಯೂ ತಪಾಸಣೆ ಮಾಡಿಸಲೇಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net