ನವದೆಹಲಿ: ಈಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಅಭಿಮಾನಿಗಳ ಸುದೀರ್ಘ ಕಾಯುವಿಕೆಯನ್ನು ರೋಹಿತ್ ಪಡೆ ಈಡೇರಿಸಿದೆ ಎಂದು ಹೇಳಬಹುದಾಗಿದೆ. ತಂಡವನ್ನು ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಹಿಟ್ಮ್ಯಾನ್ನನ್ನು ಹಾಡಿಹೊಗಳುತ್ತಿದ್ದಾರೆ. ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ರೋಹಿತ್ ಶರ್ಮಾರನ್ನು ಹಾಡಿಹೊಗಳಿದ್ದು, ಪರೋಕ್ಷವಾಗೊಇ ವಿರಾಟ್ ಕೊಹ್ಲಿಯನ್ನು ಟೀಕಿಸಿ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿರುವ ಸುನೀಲ್ ಗಾವಸ್ಕರ್, 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅಜೇಯವಾಗಿ ಕಪ್ ಗೆಲ್ಲಿಸಿಕೊಟ್ಟ ಕೀರ್ತಿ ರೋಹಿತ್ ಶರ್ಮಾಗೆ ಸಲ್ಲುತ್ತದೆ. ರೋಹಿತ್ ಭಾರತ ತಂಡದ ದಿಗ್ಗಜ ನಾಯಕರಾದ ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಸಾಲಿಗೆ ಸೇರುತ್ತಾರೆ. ಏಕೆಂದರೆ ತಂಡದ ಸದಸ್ಯರಿಂದ ಮಾತ್ರವಲ್ಲದೇ ದೇಶದ ಜನರು ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದು, ಅವರ ಕೆಲ ನಡೆ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತದೆ.
ಇದನ್ನೂ ಓದಿ: ಎಲ್ಲಾ ಪಂದ್ಯಗಳನ್ನು ವಾಂಖೆಡೆಯಲ್ಲಿ ನಡೆಸಲು ಸಾಧ್ಯವಿಲ್ಲ; ಆದಿತ್ಯ ಠಾಕ್ರೆ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ ಬಿಸಿಸಿಐ
ಆತನ ನಾಯಕತ್ವ ನೋಡುವುದಾದರೆ ಕೆಲವೊಮ್ಮೆ ಎದುರಾಳಿಗಳು ತಲೆ ಕೆಡಿಸಿಕೊಳ್ಳುತ್ತಾರೆ. ನಿಖರವಾಗಿ ಏನು ಎಂದು ಅಂದಾಜಿಸಲು ಸಾಧ್ಯವಾಗುವುದಿಲ್ಲ. ಆತ ತಂಡವನ್ನು ಯಾವ ರೀತಿ ಮುನ್ನಡೆಸಿದ ಎಂದರೆ ವೈಯಕ್ತಿಕ ಮೈಲಿಗಲ್ಲುಗಳಿಗೆ ಯಾವುದೇ ಬೆಲೆ ಕೊಡದೆ ಸಂಪೂರ್ಣವಾಗಿ ಟೀಮ್ಅನ್ನು ಗೆಲ್ಲಿಸುವುದರ ಬಗ್ಗೆ ಯೋಚಿಸಿದ. ಭಾರತ ತಂಡವು ಇಂತಹ ನಾಯಕನನ್ನು ಪಡೆಯಲು ಆಶೀರ್ವದಿಸಲ್ಪಟ್ಟಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.
ಇದಲ್ಲದೆ ಭಾರತ ಕಪ್ ಗೆಲ್ಲುವಲ್ಲಿ ರೋಹಿತ್ ಶರ್ಮಾ ಮಾತ್ರವಲ್ಲದೇ ರಾಹುಲ್ ದ್ರಾವಿಡ್ ಹಾಗೂ ಸಹಾಯಕ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವುದೇ ಸ್ವಾರ್ಥ ಇಲ್ಲದೇ ತಂಡಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದ ಎಂದು ಈ ಇಬ್ಬರ ಸಂಯೋಜನೆಯಲ್ಲಿ ನಿರೂಪಿಸಿದ್ದಾರೆ. ಒಟ್ಟಿನಲ್ಲಿ ಈ ಇಬ್ಬರನ್ನು ದೇಶದ ಜನರು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಹೇಳಿದ್ದಾರೆ.