ಸಿದ್ದಾಪುರದಲ್ಲಿ 105 ಫಾಸ್ಟ್​ಫುಡ್ ಅಂಗಡಿ ಬಂದ್

19sdp1a
Published on

ಸಿದ್ದಾಪುರ: ಕರೊನಾ ವೈರಸ್ ಆತಂಕ ಹೆಚ್ಚಾಗಿರುವುದರಿಂದ ಸಿದ್ದಾಪುರ ಪಟ್ಟಣ ಪಂಚಾಯಿತಿ ಜಾಗೃತಿ ವಹಿಸಿ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಪಟ್ಟಣದ 15 ವಾರ್ಡ್​ಗಳಲ್ಲಿ ಪಪಂ ಅಧಿಕಾರಿಗಳು ನಿತ್ಯ ಓಡಾಡುತ್ತ ಸಾರ್ವಜನಿಕರಿಗೆ, ಹೋಟೆಲ್ ಹಾಗೂ ಮತ್ತಿತರ ಅಂಗಡಿಕಾರರಿಗೆ ಕರೊನಾ ಮುಂಜಾಗ್ರತೆಯಾಗಿ ಯಾವ ರೀತಿ ಇರಬೇಕು ಎನ್ನುವುದರ ಕುರಿತು ಕರಪತ್ರ ಹಂಚುವ ಮೂಲಕ ತಿಳಿವಳಿಕೆ ನೀಡುತ್ತಿದ್ದಾರೆ. ವಿಶೇಷವಾಗಿ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ತ್ಯಾಜ್ಯ ವಸ್ತುಗಳನ್ನು ಸೂಕ್ತ ಸ್ಥಳಕ್ಕೆ ವಿಲೇವಾರಿ ಮಾಡುತ್ತಿದೆ. ಈಗಾಗಲೇ ಪಟ್ಟಣದಲ್ಲಿರುವ 105 ಫಾಸ್ಟ್ ಫುಡ್ ಅಂಗಡಿಗಳನ್ನು ಬಂದ್ ಮಾಡಿಸಿದ್ದಲ್ಲದೆ ಚಿಕನ್, ಮಟನ್ ಅಂಗಡಿಗಳನ್ನು ಮುಂದಿನ ಆದೇಶದವರೆಗೆ ತೆರೆಯದಂತೆ ವ್ಯಾಪಾರಸ್ಥರಿಗೆ ಸೂಚನೆ ನೀಡಿದೆ. ಮೀನು ಮಾರುಕಟ್ಟೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ಸ್ವಚ್ಛತೆಯ ಬಗ್ಗೆ ಹೆಚ್ಚು ಜಾಗೃತಿ ವಹಿಸುವಂತೆ ಕಟ್ಟೆಚ್ಚರ ನೀಡಿದೆ. ಪ್ರಮುಖ ವೃತ್ತಗಳಲ್ಲಿ ಕರೊನಾ ವೈರಸ್ ತಡೆ ಕುರಿತು ಬ್ಯಾನರ್ ಅಳವಡಿಕೆ, ಕರೊನಾ ಹೆಲ್ಪ್ ಡೆಸ್ಕ್ ಆರಂಭಿಸಿದೆ.

ಹೋಟೆಲ್​ಗೆ ಭೇಟಿ: ಪಟ್ಟಣದ ಎಲ್ಲ ಹೋಟೆಲ್​ಗಳಿಗೆ ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಹಕರಿಗೆ ಬಿಸಿ ನೀರನ್ನು ನೀಡುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಮಾರ್ಗದರ್ಶನದಂತೆ ತಾಲೂಕು ಆರೋಗ್ಯ ಇಲಾಖೆ ಮತ್ತು ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಕರೊನಾ ವೈರಸ್ ತಡೆ ಕುರಿತು ಪಟ್ಟಣದಲ್ಲಿ ಜಾಗೃತಿ ವಹಿಸಲಾಗಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. | ಕುಮಾರ ನಾಯ್ಕ ಪಪಂ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net